ಕೋಲಾರ: ಬಿಜೆಪಿಯ ಸಂಸದ ಬಚ್ಚೇಗೌಡ, ಮಾಜಿ ಸಚಿವರಾದ ಎಸ್ ಟಿ ಸೋಮ ಶೇಖರ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಕದ ತಟ್ಟುತ್ತಿರುವಾಗಲೇ ಇತ್ತ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ ಕೂಡ ಕಾಂಗ್ರೆಸ್ ಕಡೆಗೆ ವಾಲುತ್ತಿರುವ ಸುಳಿವು ನೀಡಿದ್ದಾರೆ. ಅಧಿಕಾರ ಇರುವೆಡೆಗೆ ರಾಜಕಾರಣಿಗಳು ವಲಸೆ ಹೋಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅವರನ್ನು ನಂಬಿ ಕಾರ್ಯಕರ್ತರಷ್ಟೆ ಪಕ್ಷ, ಸಿದ್ದಾಂತ ಎಂದೆಲ್ಲ ಹೊಡೆದಾಡಿಕೊಂಡು ಮೋಸ ಹೋಗುತ್ತಿದ್ದಾರೆ. ಕಾಂಗರಸ್ ಪಕ್ಷದ ಕೆಲವರು ನನಗೆ ಕರೆ ಮಾಡಿ ಮಾತನಾಡಿರುವುದು ನಿಜ. ಹಾಗಂತ ಜೆಡಿಎಸ್ ಪಕ್ಷ ತೊರೆಯುವುದಾಗಿ ನಾನು ಎಲ್ಲಿಯೂ ಹೇಳಿಲ್ಲ, ತೀರ್ಮಾನ ಕೈಗೊಂಡಿಲ್ಲ’ ಎಂದು ಮುಳಬಾಗಿಲು ಜೆಡಿಎಸ್ ಶಾಸಕರಾಗಿರುವ ಸಮೃದ್ಧಿ ಮಂಜುನಾಥ್ ಅವರೇ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಬಿಡುವ ತೀರ್ಮಾನ ಮಾಡಿದ್ದೇ ಆದಲ್ಲಿ ನಾಯಕರು ಹಾಗೂ ಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚಿಸಿ ಬಹಿರಂಗವಾಗಿ ಹೇಳುತ್ತೇನೆ.
ಯಾರ ಹಂಗಿನಲ್ಲೂ ನಾನಿಲ್ಲ, ಯಾರ ಬಳಿಯೂ ನಾನು ಕೈ ಚಾಚಿ ಬದುಕಿಲ್ಲ’ ಎಂದರು. ಶಾಸಕನಾಗಿ ಕ್ಷೇತ್ರದ ಕೆಲಸ ಕಾರ್ಯಗಳಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಹೋಗಬೇಕಾಗಿತ್ತು. ಆದರೆ, ವಿವಿಧ ಅರ್ಥ ಕಲ್ಪಿಸುತ್ತಾರೆ ಎಂಬ ಕಾರಣಕ್ಕೆ ನಾನು ಭೇಟಿ ಮಾಡಿಲ್ಲ ಎಂದು ಹೇಳಿದರು. ನಾನು ಮತ್ತು ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಂಬಂಧದಲ್ಲಿ ಅಣ್ಣ-ತಮ್ಮಂದಿರು. ಈ ಪ್ರೀತಿಯಿಂದಲೇ ನಾರಾಯಣಸ್ವಾಮಿ ಅವರು ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಅವರ ಸಂಬಂಧಕ್ಕೆ ನಾನು ತಲೆ ಬಾಗುತ್ತೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಆಹ್ವಾನಿಸಿದ್ದಾರೆ. ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದರು. ಬಿಜೆಪಿಯಿಂದಲೂ ನನಗೆ ಸಂಸದರಾಗಲು ಕರೆ ಬಂದಿದೆ. ಶಾಸಕ ಸ್ಥಾನದ ಬಗ್ಗೆ ನನಗೆ ತೃಪ್ತಿ ಇದೆ. ಇಡೀ ಕೋಲಾರ ಜಿಲ್ಲೆಯಲ್ಲಿ ನನ್ನ ಕ್ಷೇತ್ರದ ಜನರು 95 ಸಾವಿರ ಮತ ನೀಡಿ ಗೆಲ್ಲಿಸಿದ್ದಾರೆ. ಅವರಿಗೆ ನ್ಯಾಯ ಕೊಡುವ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು. ಸದ್ಯದಲ್ಲಿಯೇ ಜೆಡಿಎಸ್‌ನ 19 ಶಾಸಕರು, ಸೋಲು ಕಂಡವರು ಒಂದು ಕಡೆ ಸೇರಲಿದ್ದೇವೆ ಎಂದರು.