ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೋದ್ಯಮ ಮತ್ತು ಶಿಕ್ಷಣ ರಂಗಗಳ ಸಹಭಾಗಿತ್ವಕ್ಕೆ ಸಚಿವರ ಮಟ್ಟದ ಉನ್ನತ ಸಮಿತಿ ರಚಿಸಲಾಗುವುದು. ಇದರಲ್ಲಿ ತಮ್ಮೊಂದಿಗೆ ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಸಣ್ಣ ಕೈಗಾರಿಕೆ, ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವರುಗಳು ಇರಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ರಾಮಯ್ಯ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಶುಕ್ರವಾರ ಏರ್ಪಡಿಸಿದ್ದ ‘ಎಕ್ಸೀಡ್’ (ಎಕ್ಸಿಕ್ಯುಟಿವ್ ಎಜುಕೇಶನ್ ಪ್ರೋಗ್ರಾಮ್) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೈಗಾರಿಕೆ ಮತ್ತು ಶಿಕ್ಷಣರಂಗ ಜತೆಜತೆಯಾಗಿ ಹೆಜ್ಜೆ ಇಟ್ಟರೆ ಅದು ಅದ್ಭುತ ಯಶಸ್ಸನ್ನು ತಂದುಕೊಡಲಿದೆ. ತಮಗೆ ಯಾವ ರೀತಿಯ ಕೌಶಲ ಇರುವವರು ಬೇಕು ಎನ್ನುವುದನ್ನು ಉದ್ಯಮಿಗಳು ಹೇಳಿದರೆ ಅದಕ್ಕೆ ಪೂರಕವಾಗಿ ಶೈಕ್ಷಣಿಕ ವಲಯ ಕೆಲಸ ಮಾಡಲಿದೆ. ಈ ಎರಡೂ ಕ್ಷೇತ್ರಗಳನ್ನು ಒಟ್ಟಿಗೆ ಸೇರಿಸುವುದರಿಂದ ಕೌಶಲ ಮಾನವ ಸಂಪನ್ಮೂಲವನ್ನು ಸೃಷ್ಟಿಸಬಹುದು. ಇದು ನಿರುದ್ಯೋಗ ಸಮಸ್ಯೆಗೂ ಪರಿಹಾರವಾಗಲಿದೆ. ಈ ನಿಟ್ಟಿನಲ್ಲಿ ಸಚಿವರ ಮಟ್ಟದ ಸಮಿತಿ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕವು ಮೊದಲಿನಿಂದಲೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಈಗ ನಮ್ಮ ಪಠ್ಯಕ್ರಮಗಳಲ್ಲೇ ಉದ್ಯಮಕ್ಕೆ ಬೇಕಾದ ಕೌಶಲಗಳನ್ನು ಅಳವಡಿಸುತ್ತಿದ್ದೇವೆ ಎಂದು ಅವರು ನುಡಿದರು.
ಉದ್ಯಮಕ್ಕೆ ಬೇಕಾದಂತೆ ಮಾನವ ಸಂಪನ್ಮೂಲವನ್ನು ರಾಜ್ಯದಲ್ಲಿ ಸಜ್ಜುಗೊಳಿಸಲು ನಾವು ಸಿದ್ಧರಿದ್ದೇವೆ. ಇದರಿಂದ ರಾಜ್ಯದ ಯುವಜನರಿಗೂ ಉದ್ಯೋಗಾವಕಾಶಗಳು ಸಿಗಲಿವೆ. ಸಮಕಾಲೀನ ಜಗತ್ತಿನಲ್ಲಿ ಇದು ಬಹಳ ಮುಖ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಟ್ರಸ್ಟಿ ಎಂ ಆರ್ ಆನಂದರಾಮ್, ಸತೀಶ್ ರಾಮಯ್ಯ, ಉದ್ಯಮಿ ಮದನ್ ಪದಕಿ, ಅರುಂಧತಿ ರಾವ್, ಟಿವಿಎಸ್ ಮೋಟಾರ್ಸ್ ಉಪಾಧ್ಯಕ್ಷ ಎಸ್ ದೇವರಾಜನ್ ಉಪಸ್ಥಿತರಿದ್ದರು.