Saturday, December 14, 2024
Homeರಾಜ್ಯಉತ್ತರ ಕರ್ನಾಟಕಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ: ನಾಲ್ವರ ಬಂಧನ

ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ: ನಾಲ್ವರ ಬಂಧನ

ಹಾವೇರಿ: ಡಿಶ್ ಟಿ.ವಿ ಕೇಬಲ್ ಕತ್ತರಿಸಲಾಗಿದೆ ಎಂಬ ಆರೋಪದ ಮೇರೆಗೆ ದಲಿತ ವ್ಯಕ್ತಿಯನ್ನು ಥಳಿಸಿ, ಕಂಬಕ್ಕೆ ಕಟ್ಟಿ ದೌರ್ಜನ್ಯವೆಸಗಿದ ಅಮಾನವೀಯ ಘಟನೆ ಶಿಗ್ಗಾವಿ ತಾಲ್ಲೂಕಿನ ಮೂಕಬಸರಿಕಟ್ಟಿ ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ ಮೂಕಬಸರಿಕಟ್ಟಿ ಗ್ರಾಮದ ರಾಮಪ್ಪ ದುರಗಪ್ಪ ಹರಿಜನ ದೌರ್ಜನ್ಯಕ್ಕೊಳಗಾದವರು. ಹಲ್ಲೆಗೊಳಗಾದ ರಾಮಪ್ಪನಿಗೆ ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದಲಿತ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಘಟನೆ ಸುದ್ಧಿ ತಿಳಿಯುತ್ತಿದ್ದಂತೆಯೇ ಬಂಕಾಪುರ ಠಾಣೆ ಪಿಎಸ್ಐ ನಿಂಗಪ್ಪ ಕರಕನ್ನವರ ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ದಲಿತರ ಮನೆಗೆ ಭದ್ರತೆ ಒದಗಿಸಿದ್ದಾರೆ. ನಾಲ್ವರ ಬಂಧನ: ಮೂಕಬಸರಿಕಟ್ಟಿ ಗ್ರಾಮದ ಖಲಂದರ್‌ಸಾಬ್‌ ರಾಜೇಸಾಬನವರ, ರಬ್ಬಾನಿ ರಾಜೇಸಾಬನವರ, ಜಹೀರ್‌ ಅಹ್ಮದ್‌ ಸವಣೂರ, ಮೋದಿನಸಾಬ ರಾಜೇಸಾಬನವರ, ಆದಮ್ ಸಾಬ್‌ ರಾಜೇಸಾಬನವರ ಈ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಖಲಂದರ್‌ಸಾಬ್‌ ರಾಜೇಸಾಬನವರ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಈ ಕುರಿತು ಬಂಕಾಪರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಘಟನೆ ವಿವರ: ಮೂಕಬಸರಿಕಟ್ಟಿ ಗ್ರಾಮದ ರಾಮಪ್ಪ ಅವರ ಮನೆಯ ಮುಂಭಾಗದ ಮರದ ಟೊಂಗೆಗಳು ವಿದ್ಯುತ್ ಕಂಬಕ್ಕೆ ತಾಗುತ್ತಿದ್ದ ಕಾರಣ ಕೆಇಬಿ ಸಿಬ್ಬಂದಿ ಮರದ ಟೊಂಗೆಗಳನ್ನು ಕತ್ತರಿಸಿದ್ದಾರೆ. ಆಗ ಡಿಶ್ ಟಿ.ವಿ ವೈರ್‌ ತುಂಡಾಗಿ ಬಿದ್ದಿದೆ. ರಾಮಪ್ಪನೇ ವೈರ್‌ ಕತ್ತರಿಸಿದ್ದಾನೆ ಎಂದು ತಪ್ಪಾಗಿ ಭಾವಿಸಿ, ಆರೋಪಿಗಳು ರಾಮಪ್ಪನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಂಬಕ್ಕೆ ಕಟ್ಟಿ ಹಾಕಿ ದೌರ್ಜನ್ಯ ಎಸಗಿದ್ದಾರೆ.