Monday, May 19, 2025
Homeಸಾಹಿತ್ಯಕವಿತೆಕನಸೊಳಗೆ ಇಣುಕುವವಳು

ಕನಸೊಳಗೆ ಇಣುಕುವವಳು

ಸಿಟ್ಟು ಮಾಡಿ ಮಾತುಬಿಟ್ಟ ಗೆಳತಿ ಕನಸಲ್ಲಿ ಬಂದು ಕಾಡಿದಳು ನಿಜಸಿಟ್ಟಲ್ಲೋ ಇದು ಹುಸಿಕೋಪ  ಎಂದು ಸಾರಿದಳು

ಮಾತು ಬಿಟ್ಟರೇನಂತೆ ಮೌನ ಮಾತನಾಡಿದೆ ಹೃದಯದ ಭಾಷೆಗೆ  ಶಬ್ದಗಳ ಹಂಗೇಕೆ  ಎಂದು ಪ್ರಶ್ನಿಸಿದಳು

ಅವಳ ಮಾತು ಕೇಳಿ ಬೆನ್ನಿಗೊಂದು ಗುದ್ದಿ ಬಾಚಿ ತಬ್ಬಿಕೊಳ್ಳುವ ತವಕ ನನ್ನದು

ಕೈಯ ಮುಂದೆ ಚಾಚಿ ತೆಕ್ಕೆಗೆ ಎಳೆಯಲು ಮುಂದಾದ ಕ್ಷಣ ತಪ್ಪಿಸಿಕೊಂಡು ಓಡಿದಳು

ಹಂಗೇನಿಲ್ಲ, ಅಂಥದ್ದೇನಿಲ್ಲ ನನ್ನ ನಿನ್ನ ನಡುವೆ ಏನೂ ಇಲ್ಲ ಪ್ರೀತಿ ಪ್ರೇಮ ಬರಿ ಮಾಯೆ ಸ್ನೇಹವೊಂದೇ ಶಾಶ್ವತ ಏನೇನೋ ಗುನುಗುಟ್ಟುತ್ತಾ ಮುಂದೆ ಸಾಗಿದಳು

ಆಸೆ ಆಕಾಂಕ್ಷೆಗಳನ್ನು ಸುಟ್ಟು ಎದೆಯೊಳಗೆ ಪ್ರೀತಿ ಬಚ್ಚಿಟ್ಟು ಬಾಯಲ್ಲಿ ಬರೀ ವೈರಾಗ್ಯ ಬಿಚ್ಚಿಟ್ಟು ಕನಸಿನಿಂದ ಹೊರನಡೆದಳು

ಈಗಲೂ ಕನಸಿನೊಳಗೆ ಇಣುಕಿ ಇಣುಕಿ ಹೊರ ನಡೆಯುತ್ತಲೇ ಇರುವಳು