Saturday, December 14, 2024
Homeರಾಜ್ಯಮೈಸೂರು ವಿಭಾಗಕರ್ನಾಟಕದಲ್ಲಿ ‌ಬಿಜೆಪಿ ದಿವಾಳಿ: ಸಿದ್ದರಾಮಯ್ಯ

ಕರ್ನಾಟಕದಲ್ಲಿ ‌ಬಿಜೆಪಿ ದಿವಾಳಿ: ಸಿದ್ದರಾಮಯ್ಯ

ಮೈಸೂರು: ಕರ್ನಾಟಕದಲ್ಲಿ ಬಿಜೆಪಿ ದಿವಾಳಿಯಾಗಿ ಹೋಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಸೋಮವಾರ ಬಂದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸರ್ಕಾರ ರಚನೆಯಾಗಿ ನೂರು ದಿನಗಳಾಯ್ತು. ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಕರ್ನಾಟಕದ ಇತಿಹಾಸದಲ್ಲೇ ವಿರೋಧ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಎಂದರು. ನಾವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ. ಮೈಸೂರಿನಲ್ಲಿ ‌ಆ.30ರಂದು ನಡೆಯುವ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕಾರ್ಯಕ್ರಮಕ್ಕೆ ‌ಒಂದು ಲಕ್ಷ‌ ಮಂದಿ ಬರಲಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇನು ಪಕ್ಷದ ಕಾರ್ಯಕ್ರಮ ಅಲ್ಲ. ಸರ್ಕಾರದ ಕಾರ್ಯಕ್ರಮ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ ಎಂದರು.

ಗೃಹಲಕ್ಷ್ಮಿ ಯೋಜನೆಯು ಇಡೀ ದೇಶದಲ್ಲೇ ದೊಡ್ಡದಾದ ಕಾರ್ಯಕ್ರಮವಾಗಿದೆ. ವರ್ಷಕ್ಕೆ 32 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 18 ಸಾವಿರ ಕೋಟಿ ರೂಪಾಯಿ ಖರ್ಚಾಗಲಿದೆ. 1.32 ಕೋಟಿ ಕುಟುಂಬದ ಯಜಮಾನಿಯರಿಗೆ ತಲಾ 2 ಸಾವಿರ ರೂಪಾಯಿ ಕೊಡಲಿದ್ದೇವೆ ಎಂದು ವಿವರಿಸಿದರು. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳಿಂದಾಗಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ 4 ಸಾವಿರದಿಂದ 5 ಸಾವಿರ ಸಿಗುತ್ತದೆ. ಅದರಿಂದ ಅವರಿಗೆ ಕೊಂಡುಕೊಳ್ಳುವ ಶಕ್ತಿ ಜಾಸ್ತಿಯಾಗುತ್ತದೆ. ಆರ್ಥಿಕ ಚಟುವಟಿಕೆಗಳೂ ಹೆಚ್ಚಾಗುತ್ತವೆ. ಜಿಡಿಪಿಯೂ ವೃದ್ಧಿಸಿ, ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ ಎಂದರು. ‘ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರಿಸಿದ್ದಕ್ಕೆ ವಿಶೇಷ ಕಾರಣವೇನಿಲ್ಲ ಎಂದು ಪ್ರತಿಕ್ರಿಯಿಸಿದರು. ‘ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ಸಭೆ ನಡೆಸಿದೆ. ಅದು ವರದಿ ಸಲ್ಲಿಸಲಿದ್ದು, ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು. ‘ಮೋಡ ಬಿತ್ತನೆ ಎಲ್ಲೂ ಯಶಸ್ವಿಯಾಗಿಲ್ಲ. ನಾವು ಬರಗಾಲ ಪರಿಸ್ಥಿತಿ ಘೋಷಿಸಿದ ಮೇಲೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ಅವರು ಇಲ್ಲಿಗೆ ಬಂದು ಪರಿಸ್ಥಿತಿ ಅವಲೋಕಿಸುತ್ತಾರೆ. ಎನ್‌ಡಿಆರ್‌ಎಫ್ ಮಾನದಂಡದ ಅನ್ವಯವಾಗಿ ಪರಿಹಾರ ಕೊಡಬೇಕಾಗುತ್ತದೆ’ ಎಂದು ಹೇಳಿದರು. ನನ್ನನ್ನು ಬರಮಾಡಿಕೊಳ್ಳಲು ಬರಬೇಡಿ ಎಂದು ಪ್ರಧಾನಿ ನರೇಂದ್ರ‌ ಮೋದಿಯೇ ಹೇಳಿದ್ದರು. ಹೀಗಾಗಿ ಹೋಗಲಿಲ್ಲ ಎಂದು ಪ್ರತಿಕ್ರಿಯಿಸಿದರು.