ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚಾಗಿರುವ ಮಾನವ ವನ್ಯಪ್ರಾಣಿ ಸಂಘರ್ಷ ಹೆಚ್ಚಳವಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವನ್ಯಪ್ರಾಣಿಗಳು ನಾಡಿಗೆ ಬರದಂತೆ ತಡೆಗಟ್ಟಲು ವೈಜ್ಞಾನಿಕ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ಮಾನವ- ವನ್ಯಪ್ರಾಣಿ ಸಂಘರ್ಷ ಕುರಿತು ಅರಣ್ಯ ಸಚಿವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ಕಳೆದ 15 ದಿನಗಳಲ್ಲಿ 11 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದು, ನಿನ್ನೆ ನಾಗರಹೊಳೆ ಅರಣ್ಯ ಪ್ರದೇಶದ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ಕೃಷ್ಣ ನಾಯಕ್ ಎಂಬ 10 ವರ್ಷದ ಬಾಲಕನನ್ನು ಹುಲಿ ಎತ್ತೊಯ್ದಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಇಂತಹ ಘಟನೆಗಳು ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ಸೂಚಿಸಿದರು.
ಭಾರಿ ಪ್ರಮಾಣದಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿರುವ ಪ್ರಕರಣಗಳನ್ನು ಪತ್ತೆಹಚ್ಚಿ ತೆರವುಗೊಳಿಸಲು ಸೂಚಿಸಿದರು. ಹಾಸನದಲ್ಲಿ ಆನೆಗಳ ಅರಿವಳಿಕೆ ತಜ್ಞ ವೆಂಕಟೇಶ್ ಅವರು ಆನೆ ತುಳಿತಕ್ಕೆ ಬಲಿ ಆಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಗಾಯಾಳು ಆನೆಗೆ ಚಿಕಿತ್ಸೆ ನೀಡುವಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತೇ ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು ಹಾಸನ ಡಿ.ಎಫ್.ಓ. ಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ನಿರ್ದೇಶನ ನೀಡಿದರು.
ಆನೆಗಳು ಜನವಸತಿಗಳತ್ತ ಬರುವುದನ್ನು ತಡೆಯಲು ರೈಲ್ವೆ ಹಳಿಯ ತಡೆಗೋಡೆ ನಿರ್ಮಿಸಲು ಈ ವರ್ಷ 100 ಕೋಟಿ ಒದಗಿಸಲಾಗಿದೆ. ಇದರಲ್ಲಿ ಹಳೆ ಬಾಕಿ 54 ಕೋಟಿ ರೂ. ಪಾವತಿಸಬೇಕಾಗಿದೆ. ಉಳಿದ ಮೊತ್ತದಲ್ಲಿ ಕೇವಲ 50 ಕಿ.ಮೀ. ತಡೆಗೋಡೆ ನಿರ್ಮಿಸಲು ಸಾಧ್ಯವೆಂದ ಸಚಿವ ಈಶ್ವರ ಖಂಡ್ರೆ, ಹೆಚ್ಚುವರಿ ಅನುದಾನ ಒದಗಿಸಲು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಳೆ ಬಾಕಿ 54 ಕೋಟಿ ರೂ. ಜೊತೆಗೆ 100 ಕೋಟಿ ರೂ.ಗಳನ್ನು ಈ ವರ್ಷ ವೆಚ್ಚ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎನ್. ಜಯರಾಂ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. [10:12 PM]