ಮಧುಗಿರಿ: ವಿಚಾರಣಾಧೀನ ಬಂದಿಯನ್ನು ಭೇಟಿಯಾಗಲು ಅವಕಾಶ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಮಧುಗಿರಿ ಉಪ ಕಾರಾಗೃಹದ ಅಧೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೇವೇಂದ್ರ ಆರ್.ಕೋಣಿ ಸಿಕ್ಕಿಬಿದ್ದ ಆರೋಪಿ. 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, 5 ಸಾವಿರ ರೂಪಾಯಿ ಪಡೆಯುವಾಗ ಮಂಗಳವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದೇವೇಂದ್ರ ಅವರನ್ನು ವಶಕ್ಕೆ ಪಡೆದಿದ್ದಾರೆ. ಶಿರಾ ನಿವಾಸಿ ಅರ್ಬಾಜ್ ಪ್ರಕರಣವೊಂದರಲ್ಲಿ ಮಧುಗಿರಿ ಉಪ ಕಾರಾಗೃಹದಲ್ಲಿದ್ದರು. ಆಗಾಗ್ಗೆ ಅವರನ್ನು ನೋಡಲು ಮನೆಯವರು ಬರುತ್ತಿದ್ದರು. ಬಂದಾಗಲೆಲ್ಲ 1,500, 2,000 ರೂಪಾಯಿಗೆ ಬೇಡಿಕೆ ಇಡುತ್ತಿದ್ದರು. ಹಣ ಕೊಡದಿದ್ದರೆ ತುಮಕೂರು ಜೈಲಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು. ಮಂಗಳವಾರ ಕುಟುಂಬದವರು ಅರ್ಬಾಜ್ ಭೇಟಿ ಮಾಡಲು ಬಂದಿದ್ದು, ಅಧೀಕ್ಷಕ 5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ. ಲೋಕಾಯಕ್ತ ಎಸ್.ಪಿ ವಲಿಭಾಷಾ, ಡಿವೈಎಸ್‌ಪಿಗಳಾದ ಮಂಜುನಾಥ್, ಹರೀಶ್, ಇನ್‌ಸ್ಪೆಕ್ಟರ್ ಸತ್ಯನಾರಾಯಣ, ಸಲೀಂ, ರಾಮರೆಡ್ಡಿ, ಶಿವರುದ್ರಪ್ಪ ಮೇಟಿ ದಾಳಿಯಲ್ಲಿ ಭಾಗವಹಿಸಿದ್ದರು.