ಗ್ರಾಮೀಣ ಭಾಗದ ಜನರಲ್ಲಿ ಯೋಗ ಮತ್ತು ಆಯುರ್ವೇದದ ಪ್ರಯೋಜನಗಳನ್ನು ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಅಯುಷ್ ಅಭಿಯಾನ, ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಚಿತ್ರದುರ್ಗ ತಾಲ್ಲೂಕಿನ ಜೆ ಎನ್ ಕೋಟೆ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮತ್ತು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವತಿಯಿಂದ ‘ ‘ಮನೆಯಂಗಳದಿ ಯೋಗ’ ಎಂಬ ವಿಶೇಷ ಯೋಗ ತರಬೇತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿನಾಂಕ 25/8/2023ರ ಶುಕ್ರವಾರ ಜೆ ಎನ್ ಕೋಟೆ ಗ್ರಾಮದ ಗ್ರಾಮಸ್ಥರೊಬ್ಬರ ಮನೆಯಂಗಳದಿ ಆಯೋಜಿಸಿದ್ದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಮಧುಮೇಹ , ರಕ್ತದೊತ್ತಡ , ನಿದ್ರಾಹೀನತೆ ಖಾಯಿಲೆಗಳನ್ನು ತಡೆಗಟ್ಟಬಹುದಾದ ಯೋಗ ಮತ್ತು ಪ್ರಾಣಾಯಾಮಗಳ ಬಗ್ಗೆ ತರಬೇತಿ ನೀಡಲಾಯಿತು.
ತರಬೇತಿ ನೀಡಿ ಮಾತನಾಡಿದ ಯೋಗ ತರಬೇತುದಾರ ರವಿ ಕೆ.ಅಂಬೇಕರ್ ಮಾತನಾಡಿ ” ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯವೆಂದರೆ ಕೇವಲ ರೋಗರಹಿತ ಸ್ಥಿತಿಯಾಗಿರದೆ ಶಾರೀರಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾಸ್ಥ್ಯವಾಗಿರುವುದೇ ಪರಿಪೂರ್ಣ ಆರೋಗ್ಯವಾಗಿದೆ. ಔಷಧದಿಂದ ದೇಹ ಸಧೃಢವಾಗಿರಬಹುದು ಆದರೆ, ಒಬ್ಬ ಮನುಷ್ಯ ಮಾನಸಿಕವಾಗಿ ,ಸಾಮಾಜಿಕವಾಗಿ ಆರೋಗ್ಯದಿಂದಿರಬೇಕಾದರೆ ಯೋಗ, ಪ್ರಾಣಾಯಾಮ, ಧ್ಯಾನಗಳು ಅತ್ಯಾವಶ್ಯಕ ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಯುಷ್ ಇಲಾಖೆಯು ರಾಷ್ಟ್ರೀಯ ಆಯುಷ್ ಅಭಿಯಾನ ಹಾಗೂ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಹಳ್ಳಿಹಳ್ಳಿಗಳಲ್ಲಿ ಉಚಿತ ಯೋಗ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುತ್ತಿವೆ. ಗ್ರಾಮೀಣ ಭಾಗದ ಹೆಚ್ಚಿನ ಜನರು ಯೋಗ ತರಬೇತಿ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ” ಎಂದು ಸಲಹೆ ನೀಡಿದರು.