Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಮೂರ್ಛೆ ರೋಗ ಮರೆತು ಒಂದಾದ ದಂಪತಿ

ಮೂರ್ಛೆ ರೋಗ ಮರೆತು ಒಂದಾದ ದಂಪತಿ

ದಾವಣಗೆರೆ: ಪತಿಯ ವಿಚಿತ್ರ ವರ್ತನೆಯಿಂದ ಬೇಸತ್ತು ವಿಚ್ಛೇದನಕ್ಕೆ ಮುಂದಾಗಿದ್ದ ಮಹಿಳೆಯೊಬ್ಬರು ಗಂಡ ಮೂರ್ಛೆ ರೋಗದಿಂದ ಬಳಲುತ್ತಿರುವುದು ಗೊತ್ತಾದ ನಂತರ ಜೊತೆಯಾಗಿ ಬಾಳ್ವೆ ನಡೆಸಲು ನಿರ್ಧರಿಸಿದ್ದಾರೆ.

ನಗರದ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ದಂಪತಿಗಳಿಬ್ಬರು ಒಂದಾಗಿದ್ದಾರೆ.

14 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿ ಕಳೆದ ಒಂದು ವರ್ಷದಿಂದ ದೂರವಾಗಿತ್ತು. ಗಂಡನ ಕಾಟ ತಾಳಲಾರದೆ ಮಾನಸಿಕವಾಗಿ ಜರ್ಜರಿತಳಾಗಿದ್ದ ಮಹಿಳೆ ಒಮ್ಮೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಪತಿಯ ವರ್ತನೆಯಲ್ಲಿ ಬದಲಾವಣೆ ಆಗದಿದ್ದಾಗ ಮನನೊಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

‘ಗಂಡ ಆಗಾಗ ತಲೆ ತಿರುಗಿ ಬೀಳುತ್ತಿದ್ದರು. ಅವರು ಹೀಗೇಕೆ ಆಡುತ್ತಿದ್ದಾರೆ ಎಂಬುದು ಗೊತ್ತಾಗಲಿಲ್ಲ. ವೈದ್ಯರ ಬಳಿ ಕರೆದುಕೊಂಡು ಹೋಗಿ ತಪಾಸಣೆಗೆ ಒಳಪಡಿಸಿದಾಗ ಮೂರ್ಛೆ ರೋಗ ಇರುವುದು ಗೊತ್ತಾಯಿತು. ಇದು ಔಷಧದಿಂದ ಗುಣಪಡಿಸಬಹುದಾದ ರೋಗ. ಈ ಸಮಯದಲ್ಲಿ ನೀನೇ ಗಂಡನಿಗೆ ಆಸರೆಯಾಗಿರಬೇಕು ಎಂದು ವೈದ್ಯರು ಮನವರಿಕೆ ಮಾಡಿಕೊಟ್ಟ ನಂತರ ತಪ್ಪಿನ ಅರಿವಾಗಿದೆ. ಇಬ್ಬರು ಮಕ್ಕಳ ಜೊತೆಗೆ ಗಂಡನನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂದು ಮಹಿಳೆ ನ್ಯಾಯಾಧೀಶರಿಗ ತಿಳಿಸಿದರು.

‘ಮೂರ್ಛೆ ರೋಗದಿಂದಾಗಿ, ನಾನು ಏನು ಮಾಡುತ್ತಿದ್ದೇನೆ? ಯಾರೊಂದಿಗೆ ಹೇಗೆ ವರ್ತಿಸುತ್ತಿದ್ದೇನೆ ಎಂಬುದರ ಪರವೇ ಇರುತ್ತಿರಲಿಲ್ಲ. ಆ ಸಮಯದಲ್ಲಿ ‍ಪತ್ನಿಯನ್ನು ಬೈಯುತ್ತಿದ್ದೆ. ಕ್ರಮೇಣ ನನಗೆ ತಪ್ಪಿನ ಅರಿವಾಯಿತು’ ಎಂದು ಮಹಿಳೆಯ ಪತಿ ಹೇಳಿದ್ದಾರೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಅವರು ಒಂದಾದ ದಂಪತಿಗೆ ಸಿಹಿ ತಿನಿಸಿ ಶುಭ ಹಾರೈಸಿದರು.