Saturday, December 14, 2024
Homeಬೆಂಗಳೂರು ವಿಭಾಗಬೆಂಗಳೂರು ನಗರನಟ ಗಣೇಶ್ ಮನೆ ನಿರ್ಮಾಣ ಮುಂದುವರಿಕೆಗೆ ಹೈಕೋರ್ಟ್ ಅಸ್ತು

ನಟ ಗಣೇಶ್ ಮನೆ ನಿರ್ಮಾಣ ಮುಂದುವರಿಕೆಗೆ ಹೈಕೋರ್ಟ್ ಅಸ್ತು

ಬೆಂಗಳೂರು: ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಚಿತ್ರನಟ ಗಣೇಶ್ ತಮ್ಮ ವಾಸದ ಮನೆ ನಿರ್ಮಾಣ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದೆ. ಆದರೆ, “ಈ ಅನುಮತಿಯು ಅರ್ಜಿ ವಿಚಾರಣೆ ನಂತರ ಹೊರಹೊಮ್ಮುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ” ಎಂದು ಆದೇಶಿಸಿದೆ.

ಈ ಕುರಿತಂತೆ ಗಣೇಶ್‌ ಕಿಶನ್‌ ಬಿನ್‌ ಕಿಶನ್‌ ಅಲಿಯಾಸ್ ನಟ ಗಣೇಶ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, “ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜೀವನ ನಡೆಸುವುದಕ್ಕಾಗಿ ಶಾಶ್ವತ ಕಟ್ಟಡ ನಿರ್ಮಾಣ ಮಾಡಬಹುದು ಎಂದು ತಿಳಿಸಿದೆ. ಆದರೆ, ವಾಣಿಜ್ಯ ಬಳಕೆಗೆ ಅವಕಾಶವಿಲ್ಲ. ಈ ಪ್ರಕರಣದಲ್ಲಿ, ಅರ್ಜಿದಾರರು ವಾಸದ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಒಂದು ವೇಳೆ ಅಂತಿಮ ಆದೇಶ ಗಣೇಶ್ ಅವರ ವಿರುದ್ಧ ಬಂದಲ್ಲಿ ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿರುತ್ತಾರೆ” ಎಂಬ ಭರವಸೆ ನೀಡಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, “ಅರ್ಜಿಯು ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ” ಎಂದು ತಿಳಿಸಿತು.

ಪ್ರಕರಣವೇನು?: ‘ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಹೋಬಳಿಯ ಜಕ್ಕಳಿ ಗ್ರಾಮದ ಸರ್ವೇ ನಂಬರ್‌ 105ರಲ್ಲಿ ಗಣೇಶ್ 1 ಎಕರೆ 24 ಗುಂಟೆ ಜಮೀನು ಖರೀದಿಸಿದ್ದಾರೆ. ಈ ಸ್ವತ್ತಿನಲ್ಲಿ ಅವರು ಜೆಸಿಬಿ ಯಂತ್ರದ ಸಹಾಯದಿಂದ ಭೂಮಿಯನ್ನು ಸಮತಟ್ಟು ಮಾಡಿ, ಬೃಹತ್ ಕಟ್ಟಡ ನಿರ್ಮಾಣಕ್ಕೆ ತಯಾರಿ ನಡೆಸುತ್ತಿರುವುದು ಕಂಡು ಬಂದಿದೆ‘ ಎಂದು ಆಕ್ಷೇಪಿಸಿದ್ದ ಅರಣ್ಯ ಅಧಿಕಾರಿಗಳು, ‘ಷರತ್ತುಗಳನ್ನು ಉಲ್ಲಂಘಿಸಿ ಬೃಹತ್‌ ಶಾಶ್ವತ ಕಟ್ಟಡ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿರುವುದರಿಂದ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು‘ ಎಂದು ಸೂಚಿಸಿದ್ದರು.

ಈ ಸಂಬಂಧ ಬಂಡೀಪುರ ಸೂಕ್ಷ್ಮ ಪರಿಸರ ವಲಯದ ಉಸ್ತುವಾರಿ ಸಮಿತಿ, ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಂಡೀಪುರ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕರು 2023ರ ಆಗಸ್ಟ್ 14ರಂದು ಗಣೇಶ್‌ಗೆ ನೋಟಿಸ್‌ ನೀಡಿದ್ದರು. ಈ ನೋಟಿಸ್‌ ಅನ್ನು ಪ್ರಶ್ನಿಸಿ ಗಣೇಶ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.