ಬೆಂಗಳೂರು : ಮನುಷ್ಯನ ಜೀವನದಲ್ಲಿ ಪುಸ್ತಕಗಳು ಅತ್ಯುತ್ತಮ ಸಹಚರರಾಗಿ, ಮಾರ್ಗದರ್ಶಿಯಾಗಿ ಹಾಗೂ ಜೀವನದ ಸ್ನೇಹಿತನಾಗಿರುತ್ತದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ನಗರದ ಬಸವನಗುಡಿ ಎನ್.ಆರ್. ಕಾಲೋನಿಯಲ್ಲಿ ಡಾ. ಸಿ. ಅಶ್ವಥ್ ಕಲಾ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಿರಿಯ ಪತ್ರಕರ್ತೆ ಮೇರಿ ಜೋಸೆಫ್ ಅವರು ಕನ್ನಡಕ್ಕೆ ಅನುವಾದ ಮಾಡಿರುವ ಗೋವಾದ ಗೌರವಾನ್ವಿತ ರಾಜ್ಯಪಾಲರಾದ ಶ್ರೀಧರನ್ ಪಿಳ್ಳೈ ಅವರ “ಗಿಳಿಯು ಬಾರದೇ ಇರದು” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪುಸ್ತಕಗಳು ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ನಾವು ದುಃಖ ಮತ್ತು ಖಿನ್ನತೆಗೆ ಒಳಗಾದಾಗ ನಮಗೆ ಆತ್ಮವಿಶ್ವಾಸವನ್ನು ತುಂಬುತ್ತದೆ. ಒಳ್ಳೆಯ ಪುಸ್ತಕಗಳು ನಮ್ಮ ಮನಸ್ಸನ್ನು ಶಾಂತವಾಗಿಡಲು ಮತ್ತು ನಮ್ಮ ಆಲೋಚನೆಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಒಳ್ಳೆಯ ಪುಸ್ತಕಗಳು ಸ್ಫೂರ್ತಿ, ಜ್ಞಾನ, ನೈತಿಕ ಶಿಕ್ಷಣವನ್ನು ನೀಡುತ್ತವೆ ಮತ್ತು ಕೆಲವು ಪುಸ್ತಕಗಳು ಜನರ ಜೀವನದಲ್ಲಿ ಹೊಸ ತಿರುವು ತರುತ್ತವೆ. ಹಾಗಾಗಿ, ಪ್ರತಿಯೊಬ್ಬರು ಜೀವನದಲ್ಲಿ ಒಳ್ಳೆಯ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಜೀವನದ ನಿಜವಾದ ಸ್ನೇಹಿತನನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.
ಗೋವಾ ರಾಜ್ಯಪಾಲರ ಪುಸ್ತಕ ಕನ್ನಡಕ್ಕೆ ಅನುವಾದವಾಗಿ ಬಿಡುಗಡೆಯಾಗಿರುವುದು ಸಂತಸ ತಂದಿದೆ. ಈ ಪುಸ್ತಕವನ್ನು ಮಲಯಾಳಂ ಭಾಷೆಯಲ್ಲಿ ಬರೆಯಲಾಗಿದ್ದು, ಈ ಪುಸ್ತಕದ ಅಗಾಧ ಯಶಸ್ಸಿನಿಂದಾಗಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವುದು ಸಂತೋಷದ ವಿಚಾರ. ಮಲಯಾಳಂ ನ “ತತ್ತಾ ವರಾಧಿರಿಕ್ಕಿಲ್ಲಾ” ಎಂಬ ಪುಸ್ತಕವನ್ನು ಹಿರಿಯ ಪತ್ರಕರ್ತೆ ಮೇರಿ ಜೋಸೆಫ್ ಅವರು ಕನ್ನಡ ಭಾಷೆಯಲ್ಲಿ “ಗಿಳಿಯು ಬರದೇ ಇರದು” ಎಂದು ಅನುವಾದಿಸಿದ್ದಾರೆ. ಈ ಪುಸ್ತಕದಲ್ಲಿ ಗ್ರಾಮೀಣ ಜೀವನ, ಜೀವನ ಮೌಲ್ಯಗಳು, ಮಾನವೀಯ ದೃಷ್ಟಿಕೋನವನ್ನು ಸಣ್ಣ ಕಥೆಗಳ ಮೂಲಕ ಅತ್ಯಂತ ಸರಳವಾಗಿ ಪ್ರಸ್ತುತಪಡಿಸಲಾಗಿದೆ. ಈ ಪುಸ್ತಕವು ಕನ್ನಡ ಭಾಷೆಯಲ್ಲೂ ಜನಪ್ರಿಯವಾಗಲಿದೆ ಎಂಬ ನಂಬಿಕೆ ಇದೆ ಎಂದರು.
ಶ್ರೀ ಪಿಳ್ಳೈ ಅವರು ರಾಜಕೀಯ, ಸಾಮಾಜಿಕ ಮತ್ತು ಕಾನೂನು ಸಮಸ್ಯೆಗಳು ಮತ್ತು ಕಾವ್ಯ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಇಂಗ್ಲಿಷ್ ಮತ್ತು ಅವರ ಮಾತೃಭಾಷೆ ಮಲಯಾಳಂನಲ್ಲಿ ಸುಲಭವಾಗಿ ಮತ್ತು ಪ್ರಾವೀಣ್ಯತೆಯೊಂದಿಗೆ ಬರೆಯುತ್ತಾರೆ. ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ 15 ಕ್ಕೂ ಹೆಚ್ಚು ಕವನ ಸಂಕಲನಗಳು ಸೇರಿದಂತೆ 197 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವುದ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ಪುಸ್ತಕವನ್ನು ಬರೆಯುವುದು ಎಷ್ಟು ಸವಾಲಿನ ಕೆಲಸ ಎಂದು ನಮಗೆಲ್ಲರಿಗೂ ತಿಳಿದಿದೆ. ಶ್ರೀಧರನ್ ಪಿಳ್ಳೈ ಅವರು ಸಣ್ಣ ಕಥೆಗಳ ಸರಣಿಯನ್ನು ಬರೆದರು ಮತ್ತು ಅವುಗಳನ್ನು ಪುಸ್ತಕವನ್ನಾಗಿ ಮಾಡಿದರು. ಇವರಿಗೆ ಬರವಣಿಗೆಯ ಉತ್ಸಾಹವಿದೆ, ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ತಮ್ಮ ಉತ್ಸಾಹವನ್ನು ಪೂರೈಸಲು ಪುಸ್ತಕವನ್ನು ಬರೆಯಲು ಸಮಯ ತೆಗೆದುಕೊಂಡು ಅಧ್ಯಯನ ಆಸಕ್ತಿಯನ್ನು ಹೆಚ್ಚಿಸುವ ಶ್ರೀಧರನ್ ಪಿಳ್ಳೈ ಅವರು ಈ ನಡೆ ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.
ಶ್ರೀ ಪಿಳ್ಳೈ ಯವರ ಐದು ದಶಕಗಳಿಗೂ ಹೆಚ್ಚು ಕಾಲದ ಸುಪ್ರಸಿದ್ಧ ವೃತ್ತಿಜೀವನವು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಅವರ ನಿರ್ಣಾಯಕ ನಾಯಕತ್ವ ಮತ್ತು ದೂರದೃಷ್ಟಿಯಿಂದ ಸಮಾಜ ಮತ್ತು ದೇಶದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಹೊಸ ಚೈತನ್ಯ ಮತ್ತು ಹೊಸ ಉತ್ಸಾಹದಿಂದ ಅವರ ಬರೆವಣಿಗೆ ಮುಂದುವರೆಯಲಿ ಹಾಗೂ ಸಮಾಜಕ್ಕೆ ಮಾರ್ಗದರ್ಶನ ನೀಡುವಂತಾಗಲಿ ಎಂದು ಹಾರೈಸುತ್ತೇನೆ. ಹಾಗೇ, ಅವರ ಕನ್ನಡ ಅನುವಾದ ಪುಸ್ತಕವನ್ನು ಹೊರತಂದಿರುವ ವೀರ ಲೋಕ ಪ್ರಕಾಶನ ಸಂಸ್ಥೆಗೆ ಹಾಗೂ ಹಿರಿಯ ಪತ್ರಕರ್ತೆ ಮೇರಿ ಜೋಸೆಫ್ ಅವರಿಗೆ ಅಭಿನಂದನೆಗಳು ತಿಳಿಸುತ್ತಾ, ಈ ಗಿಳಿಯು ಬಾರದೇ ಇರದು ಪುಸ್ತಕವನ್ನು ಪ್ರತಿಯೊಬ್ಬರು ಓದಲೇ ಬೇಕು ಎಂದು ಮನವಿ ಮಾಡುತ್ತೇನೆ ಹಾಗೂ ಕನ್ನಡ ಭಾಷೆಯ ಪುಸ್ತಕದ ಯಶಸ್ಸನ್ನು ಬಯಸುತ್ತೇನೆಂದರು.
ಕಾರ್ಯಕ್ರದಲ್ಲಿ ಹಿರಿಯ ಪತ್ರಕರ್ತೆ ಮೇರಿ ಜೋಸೆಫ್ ಅನುವಾದಿಸಿರುವ ಗೋವಾ ರಾಜ್ಯಪಾಲರ ಪಿ ಎಸ್ ಶ್ರೀಧರನ್ ಪಿಳ್ಳೈ ಅವರ “ಗಿಳಿಯು ಬಾರದೇ ಇರದು” ಪುಸ್ತಕವನ್ನು ಜ್ಞಾನಪೀಠ ಪುರಸ್ಕೃತರಾದ ಗೌರವಾನ್ವಿತ ಡಾ. ಚಂದ್ರಶೇಖರ್ ಕಂಬಾರ್ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಗೋವಾದ ಗೌರವಾನ್ವಿತ ರಾಜ್ಯಪಾಲರ ಪಿ ಎಸ್ ಶ್ರೀಧರನ್ ಪಿಳ್ಳೈ, ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಸುದರ್ಶನ್, ಹಿರಿಯ ಪತ್ರಕರ್ತೆ ಮೇರಿ ಜೋಸೆಫ್, ಸಾಹಿತಿ ಶೋಭಾ ರಾವ್, ವೀರ ಲೋಕ ಪ್ರಕಾಶನ ಸಂಸ್ಥೆಯ ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.