“ಇಂಡಿಯಾ ಒಕ್ಕೂಟವು ಕೆಲವು ಟಿವಿ ಪತ್ರಕರ್ತರನ್ನು ಬಹಿಷ್ಕರಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುತ್ತಿದೆ, ಇದು ಸಂವಿಧಾನ ವಿರೋಧಿ ಕೃತ್ಯ. ಇದನ್ನು ಖಂಡಿಸಲೇ ಬೇಕು” ಎಂದು ಪ್ರಧಾನಿಗಳಿಂದ ಹಿಡಿದು ಸಂಘ ಪರಿವಾರದ ಅಂಗಗಳು ಅವಲತ್ತುಕೊಳ್ಳುತ್ತಿವೆ. “ತಪ್ಪು ಹೀಗೆಲ್ಲಾ ಮಾಧ್ಯಮದವರ ವಿರುದ್ಧ ನಿರ್ಣಯ ತೆಗೆದುಕೊಳ್ಳಬಾರದು” ಎಂದು ಬಿಜೆಪಿಯ ಸಮರ್ಥಕರೂ ಜಾಲತಾಣದಲ್ಲಿ ಜಾಗಟೆ ಹೊಡೆಯುತ್ತಿದ್ದಾರೆ.
ಹೌದು..ಯಾರು ಹೇಳಿದ್ದು ಪತ್ರಕರ್ತರಿಗೆ ಬಹಿಷ್ಕಾರ ಹಾಕಲಾಗಿದೆ ಎಂದು. ಯಾವ ಗೋದಿ ಮಾಧ್ಯಮಗಳ ನಿರೂಪಕರು ಏಕಪಕ್ಷೀಯವಾಗಿ ಪಕ್ಷಪಾತ ಧೋರಣೆ ತೋರುತ್ತಿದ್ದಾರೋ, ಯಾವ ಮಾರಿಕೊಂಡ ಮಾಧ್ಯಮಗಳು ಮೋದಿಯವರ ಬಟ್ಟಂಗಿಗಳಂತೆ ವರ್ತಿಸುತ್ತಿದ್ದಾರೋ, ಯಾವ ಚಮಚಾಗಿರಿ ಚಾನೆಲ್ ಗ ಳು ಬಿಜೆಪಿ ಪಕ್ಷದ ಮುಖವಾಣಿಯಾಗಿ ಪ್ರತಿಪಕ್ಷದವರ ವಿರುದ್ಧ ನಕಾರಾತ್ಮಕ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸುತ್ತಿವೆಯೋ ಅಂತಹ ಕೋಮುವ್ಯಾಧಿ ಪೀಡಿತ ಮಾಧ್ಯಮಗಳು ಆಯೋಜಿಸುವ ಚರ್ಚಾ ಕಾರ್ಯಕ್ರಮಗಳಿಗೆ ಇಂಡಿಯಾ ಒಕ್ಕೂಟದ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸುವುದಿಲ್ಲ ಎಂದು ಇಂಡಿಯಾ ಸಮನ್ವಯ ಸಮಿತಿಯ ಮಾಧ್ಯಮ ವಿಭಾಗವು ನಿರ್ಧರಿಸಿದೆ. ಗೋದಿ ಮೀಡಿಯಾ ಸುದ್ದಿ ಸಂಸ್ಥೆಗಳ ಪತ್ರಕರ್ತರು, ಸಂಪಾದಕರು, ನಿರೂಪಕರು ನಡೆಸಿಕೊಡುವ ಯಾವುದೇ ಕಾರ್ಯಕ್ರಮಗಳಿಗೆ ತಮ್ಮ ಪಕ್ಷಗಳ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲವೆಂದು ಘೋಷಿಸಲಾಗಿದೆ ಹಾಗೂ ಅಂತಹ ಪೀತ ಪತ್ರಿಕೋದ್ಯಮದ ಮತಾಂಧ ಪತ್ರಕರ್ತರ ಪಟ್ಟಿಯನ್ನು ಬಿಡುಗಡೆ ಗೊಳಿಸಲಾಗಿದೆ.
ಇದರಲ್ಲಿ ಬಹಿಷ್ಕಾರದ ಮಾತೆಲ್ಲಿ? ನಿಷೇಧದ ನಡೆಯೆಲ್ಲಿ? ಯಾರು ತಮ್ಮ ವಿರುದ್ಧ ನಿರಂತರ ವಾಗ್ದಾಳಿ ನಡೆಸಿ ಒಂದು ಪಕ್ಷ ಹಾಗೂ ಒಬ್ಬ ವ್ಯಕ್ತಿಪರ ಸುದ್ದಿಗಳನ್ನು ತಿರುಚಿ, ನಿರಂತರವಾಗಿ ಸುಳ್ಳುಗಳನ್ನು ವೈಭವೀಕರಿಸುತ್ತಿದ್ದಾರೋ ಅಂತವರ ಜೊತೆ ಚರ್ಚಿಸಿ ಏನೂ ಪ್ರಯೋಜನವಿಲ್ಲವಾದ್ದರಿಂದ ಭಾಗವಹಿಸುವುದನ್ನು ನಿಲ್ಲಿಸುತ್ತೇವೆ ಎಂದು ಹೇಳುವುದು ಅದು ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ? ಇಷ್ಟಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪತ್ರಿಕೋದ್ಯಮದ ವೃತ್ತಿಪರತೆಯನ್ನು ಸಂಘ ಪರಿವಾರಕ್ಕೆ ಅಡವಿಟ್ಟ ಗೋದಿ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಗೋದಿ ಮೀಡಿಯಾಗಳ ಯಾವುದೇ ಪ್ಯಾನಲ್ ಚರ್ಚೆಗಳನ್ನು ನೋಡಿದರೂ ಏಕಪಕ್ಷೀಯವಾಗಿರುವುದನ್ನು ಗಮನಿಸಬಹುದು. ಅಂತಹ ಸುದ್ದಿ ವಾಹಿನಿಗಳ ಸಂಪಾದಕರುಗಳು ನಿರೂಪಕರು ಚರ್ಚೆಯ ನೆಪದಲ್ಲಿ ತಮ್ಮ ಮಾಲೀಕರಿಗೆ ಇಷ್ಟವಾಗುವಂತೆ ನಿಷ್ಟೆ ತೋರಿಸುತ್ತಾ ಚರ್ಚೆಯ ದಿಕ್ಕನ್ನು ಸಂಘ ಪರಿವಾರದ ಪರವಾಗಿ ತಿರುಗಿಸುವ ಚಾಣಾಕ್ಷತೆ ಹೊಂದಿರುವವರು. ವಾಸ್ತವ ಹೀಗಿರುವಾಗ ಯಾಕೆ ಇಂಡಿಯಾ ಒಕ್ಕೂಟದ ಪಕ್ಷಗಳ ವಕ್ತಾರರು ಕರೆದಾಗ ಈ ಪೀತಪೀಡಿತ ನಿರೂಪಕರ ಜೊತೆ ಚರ್ಚೆಯಲ್ಲಿ ಭಾಗವಹಿಸಬೇಕು? ಪೂರ್ವನಿರ್ಧಾರಿತ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಫಲಿತಾಂಶ ಮ್ಯಾನುಪಲೇಟ್ ಮಾಡುವವರು ಇದೇ ಕೂಗುಮಾರಿ ನಿರೂಪಕರೇ ಅಲ್ಲವೇ? ತಮ್ಮ ಮೋದಿ ಪರ ನಿಲುವಿನ ವಿರುದ್ದ ಯಾರಾದರೂ ತಕರಾರು ಎತ್ತಿದರೆ ಜೋರಾಗಿ ಕೂಗಾಡಿ, ಗದ್ದಲ ಎಬ್ಬಿಸಿ ಚರ್ಚೆಯ ದಿಕ್ಕನ್ನೇ ಬದಲಾಯಿಸುವ, ಏಕಪಕ್ಷೀಯ ವಾದದಿಂದ ಭಿನ್ನ ಧ್ವನಿಗಳ ತೀವ್ರತೆಯನ್ನು ಅಡಗಿಸುವ ಸುದ್ದಿ ವಾಹಿನಿಗಳ ಚರ್ಚೆಯಲ್ಲಿ ಪ್ರತಿರೋಧ ತೋರುವವರು ಯಾಕೆ ಭಾಗವಹಿಸಬೇಕು? ಭಾಗವಹಿಸಿದರೂ ಅದರ ಪ್ರಯೋಜನವನ್ನು ಈ ಕೂಗುಮಾರಿ ನಿರೂಪಕರು ಹಾಗೂ ಅವರು ಪ್ರತಿನಿಧಿಸುವ ಸಿದ್ದಾಂತಗಳು ಪಡೆಯುವುದೇ ದಿಟವಾದಾಗ ಅಂತಲ್ಲಿ ಹೋಗಿ ಉಪಯೋಗವೇನು? ಆದ್ದರಿಂದ ‘ನಾವು ನಮ್ಮ ಪಕ್ಷಗಳ ವಕ್ತಾರರನ್ನು ಇಂತಹ ಪೂರ್ವಗ್ರಹಪೀಡಿತ ನಿರೂಪಕರು ನಡೆಸುವ ಕಾರ್ಯಕ್ರಮಗಳಿಗೆ ಕಳುಹಿಸುವುದಿಲ್ಲ’ ಎಂದು ಇಂಡಿಯಾ ಒಕ್ಕೂಟವು ನಿರ್ಧರಿಸಿದ್ದು ಸೂಕ್ತವೂ ಹಾಗೂ ಸಕಾಲಿಕವೂ ಆಗಿದೆ ಹಾಗೂ ವಿರೋಧ ಪಕ್ಷಗಳ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನವೂ ಆಗಿದೆ. ಕೇವಲ ರಾಷ್ಟ್ರೀಯ ಸುದ್ದಿ ವಾಹಿನಿಗಳ ಪಕ್ಷಪಾತಿ ನಿರೂಪಕರನ್ನು ಮಾತ್ರವಲ್ಲ ಪ್ರಾದೇಶಿಕ ಭಾಷಾ ಚಾನೆಲ್ ಗಳಲ್ಲಿರುವ ಕೋಮುವ್ಯಾಧಿ ನಿರೂಪಕರ ಕಾರ್ಯಕ್ರಮಗಳಿಗೂ ತಮ್ಮ ವಕ್ತಾರರನ್ನು ಕಳುಹಿಸಿಕೊಡುವುದಿಲ್ಲ ಎಂಬ ನಿರ್ಧಾರವನ್ನೂ ತೆಗೆದುಕೊಳ್ಳುವುದು ಬಾಕಿ ಇದೆ.