ಹಾವೇರಿ: ತಾಲ್ಲೂಕಿನ ಆಲದಕಟ್ಟಿಯ ಹೊರವಲಯದ ಹಾವೇರಿ –ಹಾನಗಲ್ ಮುಖ್ಯರಸ್ತೆಯ ಪಕ್ಕದ ಪಟಾಕಿ ಗೋದಾಮಿನಲ್ಲಿ ಮಂಗಳವಾರ ಬೆಂಕಿ ಹೊತ್ತಿ ಉರಿದು ಪಟಾಕಿ ಸ್ಫೋಟಗೊಂಡಿದ್ದರಿಂದ ಮೂವರು ಸಜೀವ ದಹನಗೊಂಡಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಹಾವೇರಿ ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದ ದ್ಯಾಮಪ್ಪ ಓಲೇಕಾರ (45), ರಮೇಶ ಬಾರ್ಕಿ (28), ಶಿವಲಿಂಗ ಅಕ್ಕಿ (28) ಮೃತಪಟ್ಟವರು. ಮೂವರ ದೇಹ ಬೆಂಕಿಯಿಂದ ಸುಟ್ಟು ಕರಕಲಾಗಿವೆ. ವೆಲ್ಡಿಂಗ್ ಕೆಲಸಕ್ಕೆ ಬಂದಿದ್ದ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ತಗ್ಗಿನಕೆರೆ ನಿವಾಸಿ ವಾಸಿಂ ಶಫಿ ಅಹಮದ್ (32) ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಗೋದಾಮಿನ ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದ ಪರಿಣಾಮ ಬೆನ್ನು ಮೂಳೆ ಮುರಿದುಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಗಾಯಗೊಂಡಿದ್ದ ವಾಸಿಂ ಮತ್ತು ಶೇರು ಮಾಳಪ್ಪ ಕಟ್ಟಿಮನಿ ಈ ಇಬ್ಬರನ್ನೂ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋದಾಮಿನ ಸಮೀಪದಲ್ಲಿದ್ದ ಮನೆಯ ನಿವಾಸಿ ಕಲಾವತಿ ಕೆ.ಎಸ್. ಎಂಬುವವರು ವಾತಾವರಣದಲ್ಲಿ ಹರಡಿದ ಹೊಗೆಯಿಂದ ಅಸ್ವಸ್ಥರಾಗಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತದದಾರೆ. ಹಾವೇರಿಯ ವೀರೇಶ ಸಾತೇನಹಳ್ಳಿ ಮಾಲೀಕತ್ವದ ಭೂಮಿಕಾ ಪಟಾಕಿ ಡಿಸ್ಟ್ರಿಬ್ಯೂಟರ್ಸ್‌ಗೆ ಸೇರಿದ ಗೋದಾಮಿನಲ್ಲಿ ಗಣಪತಿ ಹಬ್ಬ ಮತ್ತು ದೀಪಾವಳಿಗಾಗಿ ಪಟಾಕಿ ದಾಸ್ತಾನು ಮಾಡಲಾಗಿತ್ತು. ಗೋದಾಮಿನ ಗೇಟ್‌ಗೆ ವೆಲ್ಡಿಂಗ್ ಮಾಡುವ ಸಂದರ್ಭ ಬೆಂಕಿ ಕಿಡಿ ಹಾರಿ, 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪಟಾಕಿ ಬೆಂಕಿಗಾಹುತಿಯಾಗಿವೆ ಎಂದು ಅಂದಾಜಿಸಲಾಗಿದೆ. ಬೆಂಕಿ ಹೊತ್ತಕಳ್ಳತ್ತಿದ್ದಂತೆ ಪಟಾಕಿಗಳು ಸಿಡಿದು ಭಾರಿ ಶಬ್ದದೊಂದಿಗೆ ದಟ್ಟವಾದ ಹೊಗೆ ಉಂಟಾಯಿತು. ಇದರಿಂದ ಬೆಚ್ಚಿಬಿದ್ದ ನೆರೆಹೊರೆಯವರು ಮತ್ತು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಜನರು ಭಯದಿಂದ ದೂರದ ಪ್ರದೇಶಕ್ಕೆ ಓಡಿ ಹೋದರು. ಕೆಲಕಾಲ ಆತಂಕದ ವಾತಾವರಣ ಉಂಟಾಯಿತು. ವಿಷಯ ತಿಳಿದು ಅಗ್ನಿಶಾಮಕದ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಹಾಜರಾದರೂ ಕಟ್ಟಡದ ಒಳಗೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ. ಹೊರಗಡೆಯಿಂದಲೇ ಪೈಪ್‌ಗಳ ಮೂಲಕ ನೀರು ಬಿಟ್ಟು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಕೆಲವು ಗಂಟೆಗಳ ಕಾಲ ಪಟಾಕಿ ಒಂದೇ ಸಮನೇ ಸಿಡಿಯುತ್ತಿದ್ದವು. ನೆಲ ಮಹಡಿಯ ಬೆಂಕಿ ಆರಿಸಿದ ನಂತರ ಮೊದಲ ಮಹಡಿಗೆ ಬೆಂಕಿಯ ಕೆನ್ನಾಲಿಗೆ ಹರಡಿತು. ಆರು ಅಗ್ನಿಶಾಮಕ ವಾಹನಗಳು ಮತ್ತು 25 ಸಿಬ್ಬಂದಿ ಸತತವಾಗಿ ಐದು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಗೋದಾಮಿನ ಒಳಗಡೆ ಇನ್ನೂ ಇಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳಕ್ಕೆ ಶಾಸಕ ಬಸವರಾಜ ಶಿವಣ್ಣನವರ್, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಗುಣಾರೆ, ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ್, ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.