ಬೆಂಗಳೂರು: ಪತಿಗೆ ಬುದ್ಧಿ ಕಲಿಸಲು ಚಿನ್ನದ ಸರ ಕಳವು ನಾಟಕವಾಡಿದ ಮಹಿಳೆಯೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. 109 ಗ್ರಾಂ ತೂಕದ ಚಿನ್ನದ ಸರ ಕಳವಾಗಿದೆ ಎಂದು ಮಲ್ಲೇಶ್ವರದ ಮಹಿಳೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ಮಹಿಳೆಯೇ ಸುಳ್ಳು ದೂರು ನೀಡಿದ್ದು ಗೊತ್ತಾಗಿದೆ. ಇದೀಗ, ಮಹಿಳೆಗೆ ನೋಟಿಸ್ ನೀಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮಹಿಳೆಯ ಸ್ನೇಹಿತರಾದ ಧನಂಜಯ್ ಹಾಗೂ ರಾಕೇಶ್‌ನನ್ನು ಬಂಧಿಸಲಾಗಿದೆ. ಪತಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಿತ್ಯವೂ ಮನೆಯಲ್ಲೇ ಇರುತ್ತಿದ್ದರು. ಇದರಿಂದಾಗಿ, ಮನೆಯಲ್ಲಿ ಆರ್ಥಿಕವಾಗಿ ಕಷ್ಟವಾಗಿತ್ತು. ಮನೆಯಲ್ಲಿರುವ ಚಿನ್ನಾಭರಣ ಹಾಗೂ ಇತರೆ ವಸ್ತುಗಳು ಕಳ್ಳತನವಾದರೆ, ಜೀವನ ಮತ್ತಷ್ಟು ಕಷ್ಟವಾಗುತ್ತದೆ. ಆಗ, ಪತಿ ಕೆಲಸಕ್ಕೆ ಹೋಗಬಹುದೆಂದು ತಿಳಿದು ಮಹಿಳೆ ಕಳ್ಳತನ ನಾಟಕವಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಮಹಿಳೆ ತಮ್ಮ ಚಿನ್ನಾಭರಣವನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದರು. ಇತ್ತೀಚೆಗೆ ಬ್ಯಾಂಕ್‌ಗೆ ಹೋಗಿದ್ದ ಅವರು, 109 ಗ್ರಾಂ ತೂಕದ ಚಿನ್ನದ ಸರವನ್ನು ತೆಗೆದುಕೊಂಡು ಬಂದಿದ್ದರು. ಅದೇ ಸರವನ್ನು ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟುಕೊಂಡು ಸುತ್ತಾಡಿದ್ದರು. ಮಲ್ಲೇಶ್ವರ 13ನೇ ಕ್ರಾಸ್‌ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ, ಸ್ನೇಹಿತ ಧನಂಜಯ್‌ಗೆ ಕರೆ ಮಾಡಿದ್ದರು. ರಾಕೇಶ್ ಜೊತೆ ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದ ಧನಂಜಯ್, ಮಹಿಳೆ ಬಳಿಯ ಚಿನ್ನರ ಸರ ಪಡೆದುಕೊಂಡು ಸ್ಥಳದಿಂದ ಹೊರಟು ಹೋಗಿದ್ದ. ಕಳ್ಳ… ಕಳ್ಳ… ಎಂದು ಚೀರಾಡಿದ್ದ ಮಹಿಳೆ, ಠಾಣೆಗೆ ಬಂದು ದೂರು ನೀಡಿದ್ದರು. ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಧನಂಜಯ್ ಹಾಗೂ ರಾಕೇಶ್ ಬಗ್ಗೆ ಸುಳಿವು ಸಿಕ್ಕಿತ್ತು. ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ, ಮಹಿಳೆಯ ಕೃತ್ಯ ಪತ್ತೆಯಾಗಿದೆ.