Saturday, December 14, 2024
Homeರಾಜ್ಯಉತ್ತರ ಕರ್ನಾಟಕರೈಲಿನಲ್ಲಿ ಪ್ರಜ್ಞೆ ತಪ್ಪಿದ ಎಂಟು ಪ್ರಯಾಣಿಕರು

ರೈಲಿನಲ್ಲಿ ಪ್ರಜ್ಞೆ ತಪ್ಪಿದ ಎಂಟು ಪ್ರಯಾಣಿಕರು

ಬೆಳಗಾವಿ: ವಾಸ್ಕೊ– ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಎಂಟು ಮಂದಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಎಂಟೂ ಜನ ಮಧ್ಯಪ್ರದೇಶದ ಖಂಡ್ವಾ ಎಂಬ ಊರಿನವರು ಎಂದು ಗೊತ್ತಾಗಿದೆ. ಎಲ್ಲರೂ ಅಂದಾಜು 25ರಿಂದ 30 ವರ್ಷ ವಯಸ್ಸಿನವರಿದ್ದು, ಗೋವಾದಲ್ಲಿ ಕಾರ್ಮಿಕರಾಗಿದ್ದರು. ಹಬ್ಬದ ಕಾರಣ ವಾಸ್ಕೊ– ನಿಜಾಮುದ್ದೀನ್‌ ರೈಲಿನ ಜನರಲ್‌ ಬೋಗಿಯಲ್ಲಿ ತಮ್ಮ ಊರಿಗೆ ಹೊರಟಿದ್ದರು.

ಗೋವಾ– ಕರ್ನಾಟಕದ ಗಡಿಗೆ ರೈಲು ಬಂದಾಗ ಅಪರಿಚಿತ ವ್ಯಕ್ತಿಗಳು ಇವರಿಗೆ ಚಾಕೊಲೇಟ್‌, ಬಿಸ್ಕತ್ತು ಹಾಗೂ ಕುರುಕುರೆ ತಿನ್ನಲು ಕೊಟ್ಟಿದ್ದರು. ಅದನ್ನು ತಿಂದ ಕೆಲವೇ ನಿಮಿಷಗಳಲ್ಲಿ ಎಂಟೂ ಜನ ಪ್ರಜ್ಞೆ ತಪ್ಪಿದರು. ಬಹಳಷ್ಟು ಸಮಯದ ಬಳಿಕವೂ ಅವರು ಎಚ್ಚರವಾಗದ್ದನ್ನು ಕಂಡ ಸಹ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು.

ರೈಲು ರಾತ್ರಿ ಬೆಳಗಾವಿಗೆ ತಲುಪಿದಾಗ ರಕ್ಷಣೆಗೆ ಮುಂದಾದ ರೈಲ್ವೆ ಪೊಲೀಸರು, ಎಂಟೂ ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಘಟನೆ ನಡೆದ 28 ತಾಸುಗಳ ಬಳಿಕ ಆರು ಮಂದಿ ಕಣ್ಣು ತೆರೆದಿದ್ದಾರೆ. ಆದರೆ, ಮಾತನಾಡುವಷ್ಟು ಚೈತನ್ಯ ಬಂದಿಲ್ಲ. ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಎಂಟೂ ಮಂದಿ ಚೇತರಿಸಿಕೊಂಡ ನಂತರ ಅವರಿಂದ ಮಾಹಿತಿ ಪಡೆಯಲಾಗುವುದು. ಬಳಿಕ ತನಿಖೆ ನಡೆಯಲಿದೆ. ಗೋವಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರಿಂದ ಪ್ರಕರಣವನ್ನು ಗೋವಾ ಪೊಲೀಸರಿಗೆ ಒಪ್ಪಿಸುವ ವಿಚಾರವಿದೆ ಎಂದು ತಿಳಿಸಿದ್ದಾರೆ.