ಚಿಕ್ಕಮಗಳೂರು: ಹಳುವಳ್ಳಿ ಸಮೀಪದ ಮುಜೆಕಾನು ಗ್ರಾಮದ ಬಳಿ ಶನಿವಾರ ಕಾಡುಕೋಣದ ದಾಳಿಯಿಂದ ರೈತ ಗಂಭೀರ ಗಾಯಗೊಂಡಿದ್ದಾರೆ. ಮುಜೆಕಾನು ಗ್ರಾಮದ ಮರಿಗೌಡ (60) ಗಾಯಗೊಂಡವರು. ಅವರು ಕಳಸಕ್ಕೆ ಬರುತ್ತಿದ್ದಾಗ ಕರ‍್ನಾಳಿ ಸಮೀಪ ಕಾಡುಕೋಣ ಎದುರಾಗಿದೆ. ಕೋಣದ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಅವರು ನೆಲದ ಮೇಲೆ ಮಲಗಿದ್ದಾರೆ. ಆದರೂ ಕಾಡುಕೋಣ ಮರಿಗೌಡ ಅವರತ್ತ ನುಗ್ಗಿಬಂದು ಎದೆಗೆ ಕೋಡಿನಿಂದ ಇರಿದು ಮೇಲಕ್ಕೆ ಎಸೆದಿದೆ. ಕೋಣದ ದಾಳಿಯಿಂದ ಎದೆಯಲ್ಲಿ ತೀವ್ರವಾಗಿ ರಕ್ತಸ್ರಾವ ಆಗಿದ್ದ ಮರಿಗೌಡ ರಸ್ತೆಯಲ್ಲಿ ಬಿದ್ದು ನೆರವಿಗೆ ಕೂಗಿದರು.ಹತ್ತಿರದಲ್ಲಿದ್ದ ಹಳ್ಳಿಗರು ಅವರನ್ನು ಚಿಕಿತ್ಸೆಗೆ ಕಳಸಕ್ಕೆ ಕರೆತಂದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮರಿಗೌಡ ಅವರನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ. ಕೋಣದ ಇರಿತದಿಂದ ಶ್ವಾಸಕೋಶಕ್ಕೆ ಗಂಭೀರ ಗಾಯಗಳಾಗಿವೆ. ಹೃದಯದವರೆಗೂ ಇರಿತದ ಗಾಯ ಆಳಕ್ಕೆ ಇಳಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರೈತನ ಮೇಲೆ ಕಾಡು ಕೋಣ ದಾಳಿ: ರೈತ ಗಂಭೀರ
Previous articleವಿಡಿಯೊ ಬಿಡುಗಡೆ ಮಾಡಿದ ಇಸ್ರೊ
Next articleಜಲಪಾತದಲ್ಲಿ ಈಜಲು ಹೋದ ಯುವಕ ಸಾವು