ಬೆಳಗಾವಿ: ಸಾಲ ನೀಡಿದ ಗುತ್ತಿಗೆದಾರನ ಕಿರುಕುಳ ತಾಳದೇ ಮಹಾನಗರ ಪಾಲಿಕೆಯ ಪೌರ ಕಾರ್ಮಿಕ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಶಿಕಾಂತ ಢವಳೆ (26) ಸಾವಿಗೆ ಶರಣಾದವರು. ‘ಮಹಾನಗರ ಪಾಲಿಕೆಯ ಗುತ್ತಿಗೆದಾರ ಎನ್.ಡಿ.ಪಾಟೀಲ ಅವರ ಬಳಿ ಶಶಿಕಾಂತ ಅವರು 80 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಇದರಲ್ಲಿ 50 ಸಾವಿರ ರುಪಾಯಿ ಮರಳಿಸಿದ್ದರು. ಇನ್ನೂ 30 ಸಾವಿರ ರೂಪಾಯಿ ಶೀಘ್ರ ಕೊಡುವುದಾಗಿ ಹೇಳಿದ್ದರು. ಆದರೆ, ಸಾಲ– ಬಡ್ಡಿ ಸೇರಿ 1.50 ಲಕ್ಷ ಆಗಿದೆ. ಎಲ್ಲ ಹಣ ಕೊಡಬೇಕು ಎಂದು ಗುತ್ತಿಗೆದಾರ ಪದೇಪದೇ ಪೀಡಿಸುತ್ತಿದ್ದರು. ಇವರೊಂದಿಗೆ ಮೇಲ್ವಿಚಾರಕ ಶಂಕರ ಅಷ್ಟೇಕರ್ ಕೂಡ ಸೇರಿಕೊಂಡಿದ್ದರು. ಇಬ್ಬರೂ ಸೇರಿ ಶಶಿಕಾಂತ ಅವರಿಗೆ ಮೂರು ತಿಂಗಳಿಂದ ವೇತನ ಕೂಡ ನೀಡಿಲ್ಲ. ಅವರ ಸಾವಿಗೆ ಈ ಇಬ್ಬರೂ ಕಾರಣ’ ಎಂದು ಮೃತನ ಕುಟುಂಬದವರು ದೂರು ದಾಖಲಿಸಿದ್ದಾರೆ. ಶಶಿಕಾಂತ ಸಾವಿಗೆ ಕಾರಣರಾದ ಇಬ್ಬರನ್ನೂ ಬಂಧಿಸಬೇಕು ಹಾಗೂ ಕುಟುಂಬದವರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ, ಅವರ ಕುಟುಂಬದವರು ಹಾಗೂ ಪೌರಕಾರ್ಮಿಕರು ಇಲ್ಲಿನ ಕ್ಯಾಂಪ್ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದರು.