ಬೆಂಗಳೂರು: ಲಾಭದಲ್ಲಿದ್ದರೂ ಸಮಕಾಲೀನ ಮಾರುಕಟ್ಟೆಗೆ ತಕ್ಕಂತೆ ಇಲ್ಲದಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್ಡಿಎಲ್)ಕ್ಕೆ ಸಂಪೂರ್ಣ ಹೊಸ ರೂಪ ಕೊಟ್ಟು, ಕಾರ್ಪೊರೇಟ್ ಶೈಲಿಯಲ್ಲಿ ಅದರ ಚಟುವಟಿಕೆಗಳು ಇರುವ ಹಾಗೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಕಾರ್ಖಾನೆಯ ಆಡಳಿತ ಮಂಡಲಿ ಸಭೆಯಲ್ಲಿ ಮಾತನಾಡಿದ ಕಾರ್ಖಾನೆ ಅಧ್ಯಕ್ಷರೂ ಸಚಿವರು, ‘ಕೆಎಸ್ ಡಿಎಲ್ ಅನ್ನು ಕೇವಲ ಸರಕಾರಿ ಉದ್ದಿಮೆಯಾಗಿ ನೋಡುವ ದೃಷ್ಟಿಕೋನಕ್ಕೆ ವಿದಾಯ ಹೇಳಲಾಗುವುದು. ಈ ಸಂಸ್ಥೆ ತಯಾರಿಸುವ ಮೈಸೋಪು, ಊದುಗಡ್ಡಿ ಸೇರಿದಂತೆ ಪ್ರತಿಯೊಂದು ಉತ್ಪನ್ನವೂ ಸಾಮಾನ್ಯ ಕಿರಾಣಿ ಅಂಗಡಿಯಿಂದ ಹಿಡಿದ ಸೂಪರ್ ಸ್ಪೆಷಾಲಿಟಿ ಮಾಲ್ ವರೆಗೆ ಎಲ್ಲೆಡೆಯೂ ಸಿಗುವಂತೆ ಮಾಡಲಾಗುವುದು. ಒಟ್ಟಿನಲ್ಲಿ, ಇಡೀ ಭಾರತದಾದ್ಯಂತ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು ಎನ್ನುವುದು ಈಗಿನ ಗುರಿಯಾಗಿದೆ” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆಎಸ್ ಡಿಎಲ್ ಈಗ ಹಲವು ಬ್ರ್ಯಾಂಡ್ ಗಳನ್ನು ಹೊಂದಿದೆ. ಇವುಗಳ ಜತೆಗೆ ಹೊಸಹೊಸ ಬ್ರ್ಯಾಂಡ್ ಉತ್ಪನ್ನಗಳನ್ನೂ ತಯಾರಿಸಲಾಗುವುದು. ಲ್ಯಾವೆಂಡರ್, ಬೇವು, ಗುಲಾಬಿ, ಹರಿಶಿಣ ಇತ್ಯಾದಿ ವಿಧದ ರೀತಿಯ ಸಾಬೂನುಗಳನ್ನು ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಲಾಗುವುದು. ಗುಣಮಟ್ಟ, ದಕ್ಷ ಆಡಳಿತ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆ ಇವು ಈಗ ನಮ್ಮ ಮುಂದಿನ ಉಪಕ್ರಮಗಳಾಗಿವೆ ಎಂದು ಅವರು ತಿಳಿಸಿದರು.
ಕೆಎಸ್ ಡಿಎಲ್ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟದಿಂದ ಕೂಡಿವೆ. ಆದರೆ, ಮಾರುಕಟ್ಟೆಯಲ್ಲಿ ಡಾಬರ್, ಹಿಂದೂಸ್ಥಾನ ಯೂನಿಲಿವರ್ ಲಿಮಿಟೆಡ್ ತರಹದ ಕಂಪನಿಗಳು ಸಿಂಹಪಾಲು ಹೊಂದಿವೆ. ಜತೆಗೆ ಕೆಎಸ್ಡಿಎಲ್ ಕರ್ನಾಟಕವನ್ನು ದಾಟಿ ಆಚೆಗೆ ಹೆಚ್ಚಾಗಿ ಹೋಗಿಲ್ಲ. ಸ್ಪರ್ಧಾತ್ಮಕ ಮಾರುಕಟ್ಟೆಯ ಈ ಯುಗದಲ್ಲಿ ಈ ರೀತಿಯ ಧೋರಣೆ ಸರಿ ಇಲ್ಲ. ಇನ್ನು ಮುಂದೆ ಕೆಎಸ್ಡಿಎಲ್ ರಾಜ್ಯದ ಜತೆಗೆ ಇಡೀ ದೇಶದ ಸಾಬೂನು ಮತ್ತು ಮಾರ್ಜಕಗಳ ಮಾರುಕಟ್ಟೆಯಲ್ಲಿ ಅತ್ಯಧಿಕ ಪಾಲು ಹೊಂದಬೇಕು ಎಂದು ಅವರು ವಿವರಿಸಿದರು.
ರಾಜ್ಯದ ಉದ್ದಗಲಕ್ಕೂ ಇರುವ ಸರಕಾರಿ ಕಚೇರಿಗಳು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಇನ್ನು ಮುಂದೆ ಕೆಎಸ್ಡಿಎಲ್ ತಯಾರಿಸುವ ಸಾಬೂನು, ಲಿಕ್ವಿಡ್ ಸೋಪ್, ಹ್ಯಾಂಡ್ ವಾಶ್, ಡಿಶ್ ವಾಶ್ ಗಳನ್ನೇ ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರ ಜತೆಗೆ ವ್ಯಾಪಕ ಸ್ವರೂಪದಲ್ಲಿ ಬ್ರ್ಯಾಂಡಿಂಗ್ ಚಟುವಟಿಕೆಗಳನ್ನು ಆಕರ್ಷಕವಾಗಿ ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ನುಡಿದರು.
ಈ ಉದ್ದಿಮೆಯು ಮೈಸೂರು ಮಹಾರಾಜರ ಕಾಲದ ಹೆಗ್ಗುರುತುಗಳಲ್ಲಿ ಒಂದಾಗಿದೆ. ಇದಕ್ಕೆ ಸಮಕಾಲೀನ ಸ್ಪರ್ಶ ಕೊಡಬೇಕಾದ್ದು ಈಗಿನ ಜರೂರಾಗಿದೆ. ಲಾಭವನ್ನು ಹಿಗ್ಗಿಸಿಕೊಳ್ಳುವುದರೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುವುದೊಂದೇ ಇದಕ್ಕಿರುವ ದಾರಿಯಾಗಿದೆ ಎಂದು ಪಾಟೀಲ ಹೇಳಿದರು.
ಸಭೆಯಲ್ಲಿ ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜಕುಮಾರ್, ಕೈಗಾರಿಕಾ ಇಲಾಖೆಯ ನಿರ್ದೇಶಕ ರಮೇಶ್ ಮುಂತಾದವರಿದ್ದರು.