Saturday, December 14, 2024
Homeರಾಜ್ಯಬೆಂಗಳೂರು ವಿಭಾಗಸೇಂಟ್ ಮೇರೀಸ್ ಬೆಸಿಲಿಕಾ ಚರ್ಚ್ ಭಾವೈಕ್ಯತಾ ಕೇಂದ್ರ: ಸಿಎಂ ಸಿದ್ದರಾಮಯ್ಯ

ಸೇಂಟ್ ಮೇರೀಸ್ ಬೆಸಿಲಿಕಾ ಚರ್ಚ್ ಭಾವೈಕ್ಯತಾ ಕೇಂದ್ರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಸೇಂಟ್ ಮೇರಿಯಮ್ಮನವರ ಬೆಸಿಲಿಕಾ ಚರ್ಚ್ ಅತ್ಯಂತ ದೊಡ್ಡ ಭಾವೈಕ್ಯತಾ ಕೇಂದ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ನಲ್ಲಿ ತಾಯಿ ಮೇರಿ ಜಯಂತೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಬೆಸಿಲಿಕಾ ಪ್ರಾರ್ಥನಾ ಮಂದಿರಕ್ಕೆ ಎಲ್ಲಾ ಜಾತಿ, ಧರ್ಮದವರು ಬರುತ್ತಾರೆ. ಹೀಗಾಗಿ ಇದೊಂದು ಭಾವೈಕ್ಯತಾ ಕೇಂದ್ರವಾಗಿ ರೂಪುಗೊಂಡಿದ. ಹಗಾಗಿ ನಾನು ಈ ಜಯಂತೋತ್ಸವಕ್ಕೆ ಮತ್ತು ಹಬ್ಬಕ್ಕೆ ಪ್ರತೀ ವರ್ಷ ತಪ್ಪದೆ ಹಾಜರಾಗುತ್ತೇನೆ. ಇದು ನನಗೆ ಬಹಳ ಖುಷಿಯ ಸಂಗತಿ ಎಂದರು.

ಭಾರತವೇ ಒಂದು ಭಾವೈಕ್ಯ ಕೇಂದ್ರ. ಇಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಮನುಷ್ಯ ದ್ವೇಷಕ್ಕೆ ಜಾಗ ಇಲ್ಲ. ಕೆಲವರು ಮನುಷ್ಯ ದ್ವೇಷವನ್ನೇ ಸಂಸ್ಕೃತಿಯನ್ನಾಗಿ ಆಚರಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಸರ್ಕಾರ ದ್ವೇಷದ ವಾತಾವರಣ ಹರಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಭಾರತದ ಭಾವೈಕ್ಯತಾ ಪರಂಪರೆಯನ್ನು ಕಾಪಾಡಲು ಬದ್ದವಾಗಿದೆ ಎಂದರು.

ಯಾವ ಧರ್ಮವೂ ಮನುಷ್ಯ ದ್ವೇಷವನ್ನು ಹೇಳುವುದಿಲ್ಲ. ಆದರೆ ಕೆಲವು ಕಪಟಿಗಳು ಧರ್ಮದ ಹೆಸರಿನಲ್ಲಿ ಮನುಷ್ಯರನ್ನು , ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ಅನೈತಿಕ ಪೊಲೀಸ್ ಗಿರಿ ನೆಪದಲ್ಲಿ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಅವರಿಗೆ ತಕ್ಕ ಕಾನೂನಿನ ಶಾಸ್ತಿ ಆಗಲಿದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು.

ಕ್ರೈಸ್ತ ಸಮುದಾಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಪಾರ ಪ್ರಗತಿ ಸಾಧಿಸಿ ನಾಡಿಗೆ ಸೇವೆ ಸಲ್ಲಿಸಿರುವುದಕ್ಕೆ ಮೆಚ್ಚುಗೆ ಸೂಚಿಸಿದರು. ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರೀಸ್ ನಿಲ್ದಾಣ ಎಂದು ಹೆಸರಿಡಬೇಕು ಎನ್ನುವುದೂ ಸೇರಿ ಸಮುದಾಯದ ಮುಖಂಡರು ಮುಂದಿಟ್ಟಿರುವ ಮೂರು ಬೇಡಿಕೆಗಳ ಬಗ್ಗೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಆರ್ಚ್ ಬಿಷಪ್ ಪರಮಪೂಜ್ಯ ಡಾ.ಪೀಟರ್ ಮಚಾದೋ ಸೇರಿ ಹಲವು ಧರ್ಮಗುರುಗಳು ಉಪಸ್ಥಿತರಿದ್ದರು.