ಬೆಂಗಳೂರು: ಸಾಕುಪ್ರಾಣಿಗಳ ಆರೈಕೆಗೆ ಸಂಬಂಧಿಸಿದ ಉತ್ಪನ್ನಗಳ ಮಾರುಕಟ್ಟೆಯು ಸದ್ಯಕ್ಕೆ ರಾಜ್ಯದಲ್ಲಿ ವಾರ್ಷಿಕ 8 ಸಾವಿರ ಕೋಟಿ ರೂ.ಗಳಷ್ಟಿದೆ. ಇದು 2025ರ ಹೊತ್ತಿಗೆ 20 ಸಾವಿರ ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಪೆಟ್ ಪ್ರಾಕ್ಟೀಷನರ್ಸ್ ಆಫ್ ಕರ್ನಾಟಕ (ಪಿಪಿಎಕೆ) ಸಂಘಟನೆಯು ಮಂಗಳವಾರ ನಗರದ ಹೊರವಲಯದಲ್ಲಿ ಏರ್ಪಡಿಸಿದ್ದ ವೆಟೋಪಿಯಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅವರು ಸಾಕುಪ್ರಾಣಿಗಳ ಆಹಾರ ಮತ್ತು ಔಷಧಿಗಳು ಹಾಗೂ ಆಧುನಿಕ ತಂತ್ರಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು. ಕೈಗಾರಿಕಾ ಸಚಿವನಾಗಿ ನಾನು ಈ ಉದ್ಯಮದ ಮಹತ್ವವನ್ನು ಬಲ್ಲೆ. ಸಾಕುಪ್ರಾಣಿಗಳಿಗೆ ಸಂಬಂಧಿಸಿದ ಆರೈಕೆಯು ಈಗ ಕೇವಲ ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅದು ಸಮಗ್ರ ಪೋಷಣೆಯಾಗಿ ಬೆಳೆದಿದೆ ಎಂದು ಅವರು ನುಡಿದರು. ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಈಗ ಹೊಸ ಅರ್ಥ ಪಡೆದುಕೊಂಡಿದೆ. ಮಹಾತ್ಮ ಗಾಂಧಿಯವರು ಸಾಕುಪ್ರಾಣಿಗಳ ಬಗ್ಗೆ ಇಡೀ ಸಮಾಜವು ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಹೇಳುತ್ತಿದ್ದರು. ನಮ್ಮ ಮನೆಯಲ್ಲೂ ತಮ್ಮ ಪತ್ನಿ ಮತ್ತು ಕಿರಿಯ ಪುತ್ರನಿಗೆ ಸಾಕುನಾಯಿಗಳ ಪೋಷಣೆ ಅಚ್ಚುಮೆಚ್ಚಿನ ಹವ್ಯಾಸವಾಗಿದೆ ಎಂದು ಅವರು ನುಡಿದರು.
ಕರ್ನಾಟಕವು ಆರೋಗ್ಯ ತಂತ್ರಜ್ಞಾನದ ತಾಣವಾಗಿದೆ. ಇದರಲ್ಲಿ ನಾವೀನ್ಯತೆ ಮತ್ತು ಸುಸ್ಥಿರತೆಯ ಅಂಶಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಚಿವರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಪಿಪಿಎಕೆ ಅಧ್ಯಕ್ಷ ಡಾ.ಎಸ್ ಯತಿರಾಜ್, ಉಪಾಧ್ಯಕ್ಷ ಡಾ.ನರೇಂದ್ರ ವೇದಿಕೆಯಲ್ಲಿ ಇದ್ದರು. ದೇಶ-ವಿದೇಶಗಳಿಂದ ಬಂದಿದ್ದ 600ಕ್ಕೂ ಹೆಚ್ಚು ಪಶುವೈದ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.