Saturday, December 14, 2024
Homeಸಾಹಿತ್ಯಜಾನಪದಶಿವಾರ್ಚಕರ ಕೈ ತಪ್ಪಿದ ಚಾಮುಂಡೇಶ್ವರಿ ಪೂಜೆ

ಶಿವಾರ್ಚಕರ ಕೈ ತಪ್ಪಿದ ಚಾಮುಂಡೇಶ್ವರಿ ಪೂಜೆ

ಮುಮ್ಮಡಿ ಕೃಷ್ಣರಾಜ ಒಡೆಯರ್ 1819 ರಲ್ಲಿ ಚಾಮುಂಡಿ ದೇವಸ್ಥಾನವನ್ನು ತಮಿಳು ದೀಕ್ಷಿತ ಬ್ರಾಹ್ಮಣರಿಗೆ ಹಸ್ತಾಂತರ ಮಾಡುವವರೆಗೂ, ಕಣ್ಣ ಕನ್ನಡಿ ಅಥವಾ ಬೋನು ಗುಡಿಕೆ ಹಬ್ಬವೇ ದೇವಿಗೆ ಅತಿ ದೊಡ್ಡ ಹಬ್ಬವಾಗಿತ್ತು. ಹೆಚ್ಚಿನ ಜನರನ್ನು ಆಕರ್ಷಿಸಲು ಒಡೆಯರು ಆಗಮಿಕ ಬ್ರಾಹ್ಮಣರ ಕೈಯಲ್ಲಿ ರಥೋತ್ಸವ ಮತ್ತು ತೆಪ್ಪೋತ್ಸವ ಮಾಡಿಸುವ ನಿರ್ಧಾರ ಮಾಡಿ ಅವರಿಗೆ ದೇವಸ್ಥಾನದ ಜವಾಬ್ದಾರಿ ಕೊಟ್ಟರು.

ಅಲ್ಲಿಯವರೆಗೂ ದೇವರ ಕಾರ್ಯ ಮಾಡುತ್ತಿದ್ದ ಸ್ಥಳೀಯ ಲಿಂಗಾಯತ ಶಿವಾರ್ಚಕರು ಸುಲಭವಾಗಿ ಬಿಟ್ಟುಕೊಡಲಿಲ್ಲ. ಆದರೂ ಶಿವಾರ್ಚಕರನ್ನು ಬದಿಗೆ ಸರಿಸಲು ಕೆಲವು ಕಾರಣಗಳು ಸಿಕ್ಕವು. ದಿವಾನ್ ಪೂರ್ಣಯ್ಯ ಅವರ ಬೆಂಬಲ ದೀಕ್ಷಿತರ ಕಡೆ ಇತ್ತು. ಬ್ರಾಹ್ಮಣ ಭಕ್ತಾದಿಗಳು ಶಿವಾರ್ಚಕರಿಂದ ಪ್ರಸಾದ ಸ್ವೀಕರಿಸುತ್ತಿರಲಿಲ್ಲ. ಕೊನೆಗೊಂದು ದಿನ ಗುಡಿಯಲ್ಲಿ ಅರ್ಧ ಸೆದಿದ ಬೀಡಿಯನ್ನು ಇರಿಸಲಾಯಿತು. ದೇವಸ್ಥಾನ ಶಿವಾರ್ಚಕರ ಕೈತಪ್ಪಿತು.

ನಂತರ ಶಿವಾರ್ಚಕರು ದೀಕ್ಷಿತರಿಗೆ ಸಹಾಯ ಮಾಡುವ ಸ್ಥಾನಕ್ಕೆ ಜಾರಿದರು. ಅಲ್ಲಿಂದ ದೇವಸ್ಥಾನದಲ್ಲಿ ಇದ್ದಾಗ ಅವರು ತಮ್ಮ ಇಷ್ಟಲಿಂಗವನ್ನು ಕಾಣಿಸುವ ಹಾಗೆ ಧರಿಸುವಂತಿಲ್ಲ. ಶಿವಾರ್ಚಕರು ಗದ್ದುಗೆ ದೇವಿಯನ್ನು ಹಳ್ಳಿ ಹಳ್ಳಿಗಳಿಗೆ ತೆಗೆದುಕೊಂಡು ಹೋಗುವ ಸಂಪ್ರದಾಯವು ನಿಂತುಹೋಯಿತು.

ಚಾಮುಂಡಿ ದೇವಿಗೆ ಈಗ ನಡೆಯೋ ಬಹಳಷ್ಟು ಆಚರಣೆಗಳು ಇತ್ತೀಚಿನವು. ದೇವಸ್ಥಾನಕ್ಕೆ ಗೋಪುರ ಬಂದಿದ್ದು 1827 ರಲ್ಲಿ. ರಥೋತ್ಸವ ಶುರುವಾಗಿದ್ದು 1848 ರಲ್ಲಿ. ಇದೇ ಸಮಯದಲ್ಲಿ ಸಂಸ್ಕೃತ ಶ್ಲೋಕಗಳು ಕೆತ್ತಿದ ಒಡವೆಗಳನ್ನು ದೇವಿಗೆ ಹಾಕಲು ಶುರು ಮಾಡಿದ್ದು.

ಬೆಟ್ಟದಲ್ಲಿ ಇರುವ 33 ಗುಡಿ/ದೇವಸ್ಥಾನಗಳಲ್ಲಿ ಮಹಾಬಲೇಶ್ವರಕ್ಕೆ ಅತ್ಯಂತ ಹಳೆಯ ದಾಖಲೆ ಇದೆ. ಇದಕ್ಕೆ 1128 ರಲ್ಲಿ ಹೊಯ್ಸಳ ವಿಷ್ಣುವರ್ಧನ ದಾನ ಕೊಟ್ಟ ಮಾಹಿತಿ ಇದೆ. ಈ ದೇವಸ್ಥಾನಕ್ಕೆ ಪ್ರಚಾರ ಕಮ್ಮಿ. ಸಂಸ್ಕೃತ ಹೆಸರನ್ನು ಪಡೆದಿರುವ ಇಲ್ಲಿನ ಇನ್ನು ಹಲವಾರು ದೇವರುಗಳು ಮೂಲತಃ ಸ್ಥಳೀಯ ಆಚರಣೆ, ಹೆಸರು ಇರೋ ದೇವರುಗಳು.

ಚಾಮುಂಡಿ ದೇವಿಯ ಮೂಲ ಪೋಷಕರು ಲಿಂಗಾಯತ, ಒಕ್ಕಲಿಗ ಮತ್ತು ರಾಜ ಪರಿವಾರ ಜಾತಿಯವರು. ಚಿದಂಬರೇಶ್ವರ ದೇವರಿಗೆ ತಮಿಳು ದೀಕ್ಷಿತರ ಪೋಷಣೆ ಸಿಕ್ಕರೆ, ಇಲ್ಲಿನ ಅಂಜನೆಯನಿಗೆ ಕುಂಚಿಟಿಗರೆ ಹೆಚ್ಚಿನ ಭಕ್ತರು. ಒಡೆಯರ್ ಅವರ ಪೋಷಣೆ ಇಂದ ಚಾಮುಂಡಿ ದೇವಸ್ಥಾನ ಇಲ್ಲಿನ ಮಿಕ್ಕೆಲ್ಲ ದೇವರಿಗಿಂತ ಜನಪ್ರಿಯತೆ ಗಳಿಸಿತು. ಮಹಿಷಾಸುರ ಮರ್ದಿನಿ ಚಲನಚಿತ್ರ ಯಶಸ್ವಿಯಾದ ಮೇಲೆ ದೇವಿಯ ದರ್ಶನ ಪಡೆಯೋ ಜನರ ಭಕ್ತರ ಸಂಖ್ಯೆ ಇನ್ನು ಹೆಚ್ಚಾಯಿತು.

ರವಿ ಆಲದಮರ

ಮಾಹಿತಿ ಆಧಾರ : ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ

ಪ್ರಕಾಶಕರು: ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ, ಭಾರತ ಸರ್ಕಾರ, 1975

ಲೇಖಕರು: ಬಿ.ಬಿ.ಗೋಸ್ವಾಮಿ, ಎಸ್.ಜಿ.ಮೊರಬ್