ಮಂಡ್ಯ: ತಮಿಳುನಾಡಿಗೆ ದಿನಕ್ಕೆ 5,000 ಕ್ಯುಸೆಕ್ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದೆ. ಇದನ್ನು ಪಾಲಿಸಲು ರಾಜ್ಯ ಸರ್ಕಾರವು ಕೆ ಆರ್ ಎಸ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದೆ. ಈ ಕ್ರಮದ ವಿರುದ್ಧ ಮಂಡ್ಯದ ರೈತರು ದಂಗೆ ಎದ್ದಿದ್ದಾರೆ. ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಜಿಲ್ಲೆಯಾದ್ಯಂತ ರೈತಸಂಘ ಅಹೋರಾತ್ರಿ ಧರಣಿ ಆರಂಭಿಸಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತಸಂಘದ ಸದಸ್ಯರು ಕೆಆರ್‌ಎಸ್ ಜಲಾಶಯದ ನಾರ್ತ್‌ಬ್ಯಾಂಕ್ ಬಳಿ ಅಹೋರಾತ್ರಿ ಧರಣಿ ಆರಂಭಿಸಿದರು. ರೈತಸಂಘ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ‘ಯಾವ ಮಾನದಂಡದ ಆಧಾರದ ಮೇಲೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು. ಸಂಕಷ್ಟ ಸಂದರ್ಭದಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶ ಬರ ಪರಿಸ್ಥಿತಿ ಎದುರಿಸುತ್ತಿದೆ. ಕೂಡಲೇ ಸಂಕಷ್ಟ ಸೂತ್ರ ಜಾರಿಯಾಗಬೇಕು, ನೀರು ನಿಲುಗಡೆಯಾಗುವವರೆಗೂ ಧರಣಿ ನಿಲ್ಲುವುದಿಲ್ಲ’ ಎಂದರು. ಶ್ರೀರಂಗಪಟ್ಟಣದಲ್ಲಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಬುಧವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಂಡ್ಯದಲ್ಲಿ ಮಂಡ್ಯ ಯೂತ್ ಗ್ರೂಪ್ ಸದಸ್ಯರು ಮೆರವಣಿಗೆ ನಡೆಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟ ಮುಂದುವರಿಸಲು ಕರೆ ಕೊಟ್ಟಿದೆ.