ಬೆಂಗಳೂರು: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ನನ್ನ ಹಾಗೂ ನನ್ನ ದತ್ತು ಪುತ್ರ ಬಳ್ಳೂರು ಉಮೇಶ್ ಹೆಸರು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡಲಾಗಿದ್ದು, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ನಗರದ ಪೊಲೀಸ್ ಕಮಿಷನರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ವಿವಿಧ ಪರಿಸರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.
‘ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ಅವರ ವಂಚನೆ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ, ನಮ್ಮಿಬ್ಬರ ಹೆಸರು ಪ್ರಕರಣಕ್ಕೆ ತಳುಕು ಹಾಕಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನನ್ನ ಸಂಪೂರ್ಣ ಜೀವನವನ್ನೇ ನೆಲ, ಜಲ, ಪರಿಸರಕ್ಕೆ ಮೀಸಲಿಟ್ಟಿದ್ದೇನೆ. ಸರ್ಕಾರ ನೀಡಿದ ಸವಲತ್ತುಗಳನ್ನು ಬೇರೆಯವರಿಗೆ ನೀಡಿ ವಂಚನೆ ಮಾಡಲು ಅವಕಾಶ ಮಾಡಿಕೊಟ್ಟಿದ್ಧೇವೆ ಎಂದು ಸುದ್ದಿ ವಾಹಿನಿಯೊಂದು ವರದಿ ಪ್ರಸಾರ ಮಾಡಿದೆ. ವರದಿ ಮಾಡಿದವರು ಸಾಕ್ಷ್ಯಗಳನ್ನು ನೀಡಲಿ. ಕಲ್ಪಿತ ವರದಿ ಮಾಡಿ ಗೌರವಕ್ಕೆ ಧಕ್ಕೆ ತರಲಾಗಿದೆ’ ಎಂದು ಸಾಲುಮರದ ತಿಮ್ಮಕ್ಕ ಹೇಳಿದರು.
‘ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯಾಗಿದ್ದು ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದೇನೆ. ಸರ್ಕಾರ ನೀಡಿರುವ ಕಾರಿನ ಸಂಖ್ಯೆ ಕೆಎ 50 ಜಿ 6363 ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ವರದಿ ಬಿತ್ತರಿಸಲಾಗಿದೆ. ಆರೋಪಿ ಚನ್ನನಾಯಕ ನನಗೆ ಸರ್ಕಾರ ನೀಡಿರುವ ಕಾರು ಬಳಸಿದ್ದಾನೆ. ಮತ್ತೊಬ್ಬ ಆರೋಪಿ ಗಗನ್ ಕಡೂರು ವಿಧಾನಸೌಧದ ಕೊಠಡಿಯನ್ನು ನವೀಕರಣ ಮಾಡಿಕೊಟ್ಟಿದ್ದಾನೆ ಎಂದು ಹೇಳಲಾಗಿದೆ. ನನಗೆ ವಿಧಾನಸೌಧದಲ್ಲಿ ಕೊಠಡಿಯೇ ಇಲ್ಲ. ಎಲ್ಲವೂ ಸುದ್ದಿ ಸುಳ್ಳು. ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಸಂಧ್ಯಾಕಾಲದಲ್ಲಿ ತೇಜೋವಧೆ ಮಾಡಿದ್ದು ನೋವು ತರಿಸಿದೆ’ ಎಂದು ಹೇಳಿದರು.