ಮಂಗಳೂರು: ಪಣಂಬೂರು ಕಡಲ ಕಿನಾರೆ ಬಳಿ ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಮಾರಾಟಕ್ಕೆ ಯತ್ನಿಸಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 900 ಗ್ರಾಂ ತಿಮಿಂಗಿಲ ವಾಂತಿಯನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಯ ಸಾಲಿಗ್ರಾಮದ ಜಯಕರ (39), ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆದಿತ್ಯ (25), ಹಾವೇರಿ ಜಿಲ್ಲೆಯ ಶಿಗ್ಗಾವಿಯ ಲೋಹಿತ್ ಕುಮಾರ್ ಗುರಪ್ಪನವರ್ (39) ಬಂಧಿತ ಆರೋಪಿಗಳು.
ಆರೋಪಿಗಳು ತಿಮಿಂಗಿಲ ವಾಂತಿಯ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಬಂದ ವರ್ತಮಾನದ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳ ಬಳಿ 900 ಗ್ರಾಂ ತಿಮಿಂಗಿಲ ವಾಂತಿ ಪತ್ತೆಯಾಗಿದೆ. ಮಾರುಕಟ್ಟೆಯಲ್ಲಿ ಅದಕ್ಕೆ 90 ಲಕ್ಷ ರೂಪಾಯಿ ಮೌಲ್ಯ ಇದೆ ಎಂದು ಅಂದಾಜಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದರು.