Saturday, December 14, 2024
Homeಸುದ್ದಿರಾಜ್ಯಉಪೇಂದ್ರ ಚಿತ್ರಗಳ ದುಷ್ಪರಿಣಾಮ

ಉಪೇಂದ್ರ ಚಿತ್ರಗಳ ದುಷ್ಪರಿಣಾಮ

ನನ್ನ ಕಾಲೇಜು ದಿನಗಳಲ್ಲಿ ತರ್ಲೆ ನನ್ ಮಗ ಅನ್ನೋ ಡಬಲ್ ಮೀನಿಂಗ್ ಸಿನೆಮಾ ಬಂತು, ಆ ಸಿನೆಮಾ ನೋಡಿ ಹುಡುಗರು “ಒಲ್ಲೆ” ಎಂದ ಹುಡುಗಿಯರನೆಲ್ಲ “ಡಗಾರ್” ಎಂದು ಕರೆಯಲು ಶುರುಮಾಡಿಕೊಂಡರು. ನಂತರ A, ಉಪೇಂದ್ರ ಅನ್ನೋ ಸಿನೆಮಾಗಳು ಬಂದವು. ಈ ಚಿತ್ರಗಳ ವಿಲಕ್ಷಣತೆ ಕಲಿತ ಹುಡುಗರು ಓದು ಬರಹಗಳಿಂದ ವಿಮುಖರಾಗಿ ಹಾಳಾದರು. ಕುಡಿತ, ನಾಲಿಗೆ ಮತ್ತು ಮೆದುಳಿನ ನಡುವೆ ಇರುವ ಫಿಲ್ಟರ್ ಇಲ್ಲವಾಗಿಸುತ್ತದೆ. ಅದೇ ನಿಜವಾದ “ತೀರ್ಥ” ಅಂತ ನಂಬಿ ಕುಡಿದು ಕುಡಿದು ಜೀವ ಕಳೆದುಕೊಂಡವರೆಷ್ಟೋ. ನಿನ್ನನ್ನ ಪ್ರೀತಿಸುವೆ ಆದರೆ ಅವಳನ್ನ ಮದುವೆಯಾಗುವೆ ಅಂತ ಡೈಲಾಗ್ ಹೊಡೆದು ಸಂಕಷ್ಟಕ್ಕೆ ಸಿಲುಕಿದವರೆಷ್ಟೋ. ಇನ್ನು ಸೂಪರ್ ಸ್ಟಾರ್, ಪ್ರೀತ್ಸೆ ದಂತಹ ಚಿತ್ರಗಳನ್ನ ನೋಡಿ ಸ್ಟಾಕಿಂಗ್ ಒಳ್ಳೆಯದೇ ಅಂತ ಅಂತರ್ಗತ ಮಾಡಿಕೊಂಡವರು ಸಾವಿರಾರು ಮಂದಿ. ಓಂ ನಂತಹ ಚಿತ್ರ ನೋಡಿ ಶುರುವಾದ ಟ್ರೆಂಡ್, ಮಚ್ಚು ಲಾಂಗ್ ಅಂತ ಬೀದಿ ಹೆಣವಾಗುತ್ತಿರುವವರು ಈಗಲೂ ಇದ್ದಾರೆ.

ಇವನ ಚಿತ್ರಗಳ ಅತಿ ಹೆಚ್ಚು ದುಷ್ಪರಿಣಾಮ ಆಗಿದ್ದು ಶಿಕ್ಷಣವಂಚಿತ ಶೂದ್ರ ಮತ್ತು ದಲಿತ ಸಮುದಾಯಗಳ ಮೇಲೆಯೇ. ಸಮಾಜದ ಅತ್ಯಂತ ಜಟಿಲ, ಸಂಕೀರ್ಣ ಸಮಸ್ಯೆಗಳಿಗೆ ಈತ ಸರಳ ಮತ್ತು ಸಿಲ್ಲಿ ಪರಿಹಾರಗಳನ್ನ ನೀಡುತ್ತಿದ್ದುದೇ ಇದಕ್ಕೆ ಕಾರಣ. ಈತ ನೀಡುತ್ತಿದ್ದ ಪರಿಹಾರಗಳಲ್ಲಿ ಒಂದು ಸೊಕ್ಕಿದೆ, ನಕಲಿ ಬಂಡಾಯದ ನೆರಳಿದೆ. ಇವು ಪರಿಹಾರ ಎಷ್ಟು ಹಾಸ್ಯಾಸ್ಪದ ಅನ್ನೋದನ್ನ ಮರೆಮಾಚುತ್ತದೆ. ಜನರಿಗೂ ಕೂಡ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಬೇಕಾಗಿರುವುದರಿಂದ ಈತನ ಪೊಳ್ಳು ಅಬ್ಬರ, ಅಭಿನಾಯತಿರೇಕಾಗಳು ಇಷ್ಟವಾಗುತ್ತವೆ.(ಇವ ದೇಶ ಪ್ರಧಾನಿ ಆದರೆ ನಮ್ಮ ದೇಶ ಸುಭೀಕ್ಷವಾಗುತ್ತದೆ, ಕಾವೇರಿ ವಿವಾದ ಕೊನೆಗೊಳ್ಳುತ್ತದೆ ಅಂತ ಕನಸು ಕಾಣುವ ಶೂದ್ರರು ಮತ್ತು ದಲಿತರಿದ್ದರು… H20 ನೆನಪಿಸಿಕೊಳ್ಳಿ)

ಮೇಲ್ಜಾತಿಯವರು ತುಂಬಾ conscious ಆಗಿ ಕೆಳಜಾತಿಯವರ ಮೇಲೆ ಪ್ರಯೋಗಿಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯುಧ ಈತನೆನ್ನುವುದರ ಬಗ್ಗೆ ನನಗ್ಯಾವಾ ಅನುಮಾನಗಳಿಲ್ಲ. ಈ ವಿಷಯ ಆಕಸ್ಮಿಕವಾಗಿ ಇಂದು ಬಯಲಾಗಿದೆ. ಇನ್ನಾದರೂ ನಮ್ಮ ಜನ ಎಚ್ಚೆತ್ತುಕೊಳ್ಳಲಿ. ಪ್ರಶಾಂತ್ ನೀಲ್ ಹೇಳುವ ಹಾಗೆ ಈತ ಕನ್ನಡ ಚಿತ್ರರಂಗದ path breaking ನಿರ್ದೇಶಕನಂತು ಅಲ್ಲವೇ ಅಲ್ಲ…

ಹರೀಶ್ ಗಂಗಾಧರ