Saturday, December 14, 2024
Homeಬೆಂಗಳೂರು ವಿಭಾಗಬೆಂಗಳೂರು ನಗರವೀರಶೈವ ಲಿಂಗಾಯತರಲ್ಲಿ ಸಂಘಟನೆ ಅತ್ಯಗತ್ಯ: ಎಂ ಬಿ ಪಾಟೀಲ

ವೀರಶೈವ ಲಿಂಗಾಯತರಲ್ಲಿ ಸಂಘಟನೆ ಅತ್ಯಗತ್ಯ: ಎಂ ಬಿ ಪಾಟೀಲ

ಬೆಂಗಳೂರು: ವೀರಶೈವ-ಲಿಂಗಾಯತರು ತಮ್ಮಲ್ಲಿರುವ ಉಪಪಂಗಡಗಳ ಮೇಲಾಟವನ್ನು ಮರೆತು ಒಂದಾದಾಗ ಮಾತ್ರ ರಾಜ್ಯದಲ್ಲಿ ಶೇಕಡ 17ರಿಂದ 20ರಷ್ಟು ಇರುವ ಸಮುದಾಯದ ಜನಸಂಖ್ಯೆಯ ಶಕ್ತಿಯನ್ನು ತೋರಿಸಬಹುದಷ್ಟೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಶನಿವಾರ ಇಲ್ಲಿ ನಡೆದ ಕರ್ನಾಟಕ ವೀರಶೈವ ಲಿಂಗಾಯತ ಎಂಪ್ಲಾಯೀಸ್ ಕ್ರೆಡಿಟ್ ಕೋಆಪರೇಟೀವ್ ಸೋಸೈಟಿ ಲಿಮಿಟೆಡ್ ಸಂಸ್ಥೆಯ ಮೂರನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ವೀರಶೈವ ಲಿಂಗಾಯತರು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಹಲವು ಹಿರಿಯರ ಶ್ರಮದಿಂದ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಆದರೆ ಇದೇ ತರಹದ ಸಾಧನೆಯನ್ನು ಸಮುದಾಯವು ಉಳಿದ ರಂಗಗಳಲ್ಲಿ ಮಾಡಿಲ್ಲ. ವಿಶೇಷವಾಗಿ ಕರ್ನಾಟಕ ಲೋಕಸೇವಾ ಆಯೋಗದ ಕಡೆಗೆ ಸಮುದಾಯವು 40 ವರ್ಷಗಳ ಕಾಲ ಗಮನವನ್ನೇ ಹರಿಸಲಿಲ್ಲ. ಇದರಿಂದಾಗಿ ಸಮುದಾಯವು ದುರ್ಬಲವಾಯಿತು. ಇದರಲ್ಲಿ ನನ್ನದೂ ಸೇರಿದಂತೆ ಹಲವರ ತಪ್ಪಿದೆ ಎಂದು ಅವರು ಅಭಿಪ್ರಾಯಪಟ್ಟರು.

ಉತ್ತರ ಕರ್ನಾಟಕದಲ್ಲಿ ಸರ್ ಸಿದ್ದಪ್ಪ ಕಂಬಳಿ, ಫ.ಗು.ಹಳಕಟ್ಟಿ, ಡೆಪ್ಯುಟಿ ಚೆನ್ನಬಸಪ್ಪ, ಡಿ.ಸಿ.ಪಾವಟೆ ಮುಂತಾದವರು ಸಮುದಾಯದ ಸಂಘಟನೆ ಮತ್ತು ಏಳಿಗೆಗಾಗಿ ಅಪಾರ ಶ್ರಮಪಟ್ಟಿದ್ದಾರೆ. ಅಂತಹ ಧೀಮಂತರ ಹೆಸರುಗಳು ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಿನವರಿಗೆ ಇಂದಿಗೂ ಗೊತ್ತೇ ಇಲ್ಲ. ಇದು ತುಂಬಾ ಬೇಸರದ ಸಂಗತಿ ಎಂದು ಅವರು ನುಡಿದರು.

ಕೆವಿಎಲ್ ಸೊಸೈಟಿಯು ವೀರಶೈವ ಲಿಂಗಾಯತ ಸಮುದಾಯದ ಸದಸ್ಯರಿಗೆ ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ನಮ್ಮಲ್ಲಿ ಎಷ್ಟೋ ಒಳಪಂಗಡಗಳ ಜನಸಂಖ್ಯೆಯು ಶೇಕಡ ಒಂದಕ್ಕಿಂತ ಕಡಿಮೆ ಇದೆ. ಹೀಗಿರುವಾಗ ಇವುಗಳ ಹೆಸರಿನಲ್ಲಿ ಕಿತ್ತಾಡುತ್ತಲೇ ಇದ್ದರೆ, ಇಡೀ ಸಮುದಾಯವೇ ಛಿದ್ರವಾಗಿ ಹೋಗುತ್ತದಷ್ಟೆ. ಆದ್ದರಿಂದ ಸಮುದಾಯದವರೆಲ್ಲರೂ ಪಕ್ಷಾತೀತವಾಗಿ ಸಂಘಟನೆಗೆ ಬೆಂಬಲ ಕೊಡಬೇಕು ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಚಿವರಾದ ಶರಣಪ್ರಕಾಶ್ ಪಾಟೀಲ, ಈಶ್ವರ ಖಂಡ್ರೆ ಮುಂತಾದವರು ಉಪಸ್ಥಿತರಿದ್ದರು.