ಬೆಳಗಾವಿ: ಇಲ್ಲಿನ ಭಾಗ್ಯನಗರದಲ್ಲಿ ಶನಿವಾರ ಹರಿದುಬಿದ್ದ ವಿದ್ಯುತ್ ತಂತಿ ತುಳಿದು 14 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಉತ್ತರ ಪ್ರದೇಶ ಮೂಲದ ರಜತ್ ಗೌರವ್ (14) ಮೃತ ಬಾಲಕ. ಭಾಗ್ಯನಗರದ 10ನೇ ಕ್ರಾಸ್‌ನಲ್ಲಿರುವ ಈ ಬಾಲಕನ ಚಿಕ್ಕಪ್ಪ ಮನೆಮನೆಗೆ ಪೇಪರ್ ಹಾಕುತ್ತಿದ್ದರು. ರಜತ್ ಕೂಡ ಅವರಿಗೆ ನೆರವಾಗಿ ಪೇಪರ್ ಹಾಕುತ್ತಿದ್ದ.
ಪಕ್ಕದ ಮನೆಯ ಚೌಗಲೆ ಎನ್ನುವವರ ಕಾಂಪೌಂಡ್ ಒಳಗೆ ಹೋಗಿ ಪೇಪರ್ ಎಸೆದುಬರುತ್ತಿದ್ದ. ಮರಳಿ ಕರೆದ ಮನೆಯ ಮಾಲೀಕ ಅಮಾವಾಸ್ಯೆಯ ಕಾರಣ ಕಾರ್ ತೊಳೆದುಕೊಡು ಎಂದರು. ಅವರೊಂದಿಗೆ ಕಾರ್ ತೊಳೆಯಲು ಮುಂದಾದ ಬಾಲಕ ಆಕಸ್ಮಿಕವಾಗಿ ವಿದ್ಯುತ್ ತಂತಿ ಮೇಲೆ ಕಾಲಿಟ್ಟ ಎಂದು ತಿಳಿಸಲಾಗಿದೆ.
ವಿದ್ಯುತ್ ಸ್ಪರ್ಶದಿಂದ ಪ್ರಜ್ಞೆ ತಪ್ಪಿ ಬಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಗಲೇ ಆತ ಕೊನೆಯುಸಿರೆಳೆದ್ದಾಗಿ ವೈದ್ಯರು ತಿಳಿಸಿದರು.
‘ತಮ್ಮ ಮಗನಿಗೆ ಚೌಗಲೆ ಅವರು ಕಾರ್ ತೊಳೆಯಲು ಹೇಳಿದ್ದರಿಂದ ಘಟನೆ ನಡೆದಿದೆ. ಈ ಸಾವಿಗೆ ಅವರೇ ಹೊಣೆ’ ಎಂದು ಮೃತನ ತಂದೆ– ತಾಯಿ ಆರೋಪಿಸಿದ್ದಾರೆ.
‘ರಜತ್‌ಗೆ ವಿದ್ಯುತ್ ಸ್ಪರ್ಶವಾದ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೆ ಪ್ರಾಣ ಉಳಿಯುತ್ತಿತ್ತು. ಆದರೆ, ಚೌಗಲೆ ಅವರು ನಮಗೆ ಫೋನ್ ಮಾಡಿ ಮಗನನ್ನು ಆಸ್ಪತ್ರೆಗೆ oಕರೆದುಕೊಂಡು ಹೋಗಿ ಎಂದರು. ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಮಗ ಕಾರಿನ ಪಕ್ಕ ಶವವಾಗಿ ಬಿದ್ದಿದ್ದ’ ಎಂದು ಮೃತನ ಪಾಲಕರು ದೂರಿದ್ದಾರೆ.
ಶಹಾಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.