Saturday, December 14, 2024
Homeಬೆಂಗಳೂರು ವಿಭಾಗಬೆಂಗಳೂರು ನಗರವಿಜಯಪುರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆ: ಸಚಿವ ಎಂ ಬಿ ಪಾಟೀಲ ಗಡುವು

ವಿಜಯಪುರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆ: ಸಚಿವ ಎಂ ಬಿ ಪಾಟೀಲ ಗಡುವು

ಬೆಂಗಳೂರು: ವಿಜಯಪುರ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳನ್ನೆಲ್ಲ ನವೆಂಬರ್ ಹೊತ್ತಿಗೆ ಮುಗಿಸಬೇಕು. ಬಳಿಕ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೇರಿದಂತೆ ಎಲ್ಲ ಕಡೆಗಳಿಂದ ಅನುಮತಿ ಪಡೆದು, 2024ರ ಫೆಬ್ರುವರಿ ವೇಳೆಗೆ ವಿಮಾನ ನಿಲ್ದಾಣ ಉದ್ಘಾಟನೆ ಆಗಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಗಡುವು ನೀಡಿದ್ದಾರೆ.

ಗುರುವಾರ ಇಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ವಿವಿಧ ಮೂಲಸೌಕರ್ಯ ಯೋಜನೆಗಳ ಪ್ರಗತಿ ಕುರಿತು ವಿಸ್ತೃತ ಸಭೆ ನಡೆಸಿದ ಅವರು, ಉದ್ಘಾಟನೆಯ ದಿನದಿಂದಲೇ ವಿಮಾನಗಳ ಹಾರಾಟ ಆರಂಭವಾಗಬೇಕು. ಇದಕ್ಕೆ ಪೂರಕವಾಗಿ ಈಗಿನಿಂದಲೇ ವಿಮಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ತಾಕೀತು ಮಾಡಿದರು.

ವಿಜಯಪುರ ವಿಮಾನ ನಿಲ್ದಾಣ ಯೋಜನೆಯ ಮೂಲದಲ್ಲಿ ರಾತ್ರಿ ಹೊತ್ತು ವಿಮಾನ ಇಳಿಯಲು ಸೌಲಭ್ಯವಿರಲಿಲ್ಲ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ ನೈಟ್ ಲ್ಯಾಂಡಿಂಗಿಗೂ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಯಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು 7.25 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣವಾಗಲಿದ್ದು, ಇದಕ್ಕಾಗಿ 54.50 ಕೋಟಿ ರೂ. ವೆಚ್ಚವಾಗಲಿದೆ. ಇವೆರಡಕ್ಕೂ ಅಗತ್ಯವಿರುವ 5.50 ಎಕರೆ ಭೂಸ್ವಾಧೀನವನ್ನು ತ್ವರಿತವಾಗಿ ಮುಗಿಸಬೇಕು. ಯೋಜನೆಯ ವೆಚ್ಚದಲ್ಲಿ 6 ಕೋಟಿ ರೂ.ಗಳನ್ನು ಭೂಸ್ವಾಧೀನಕ್ಕೆ ಮೀಸಲಿಡಲಾಗಿದೆ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಒಟ್ಟು 727 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತುತ್ತಿರುವ ವಿಮಾನ ನಿಲ್ದಾಣಕ್ಕೆ 347.92 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಈ ಪೈಕಿ ಈ ವರ್ಷದ ಆಗಸ್ಟ್ ತಿಂಗಳವರೆಗೆ 303.70 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈಗ ಮುಂದಿನ 2 ತಿಂಗಳಲ್ಲಿ ಭದ್ರತಾ ಮತ್ತು ಅಗ್ನಿಶಾಮಕ ಸಿಬ್ಬಂದಿ, ವಿಮಾನ ನಿಲ್ದಾಣ ನಿರ್ದೇಶಕರು ಮತ್ತು ಟರ್ಮಿನಲ್ ಮ್ಯಾನೇಜರ್ ನೇಮಕಾತಿ ಹಾಗೂ ವಾಹನಗಳ ಖರೀದಿ ಮುಗಿಸಬೇಕು ಎಂದು ಅವರು ತಿಳಿಸಿದರು.

ಮಿಕ್ಕಂತೆ, ತುಮಕೂರು-ದಾವಣಗೆರೆ ಮತ್ತು ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಇದನ್ನು 2024ರ ಫೆಬ್ರವರಿ ವೇಳೆಗೆ ಕಡ್ಡಾಯವಾಗಿ ಮುಗಿಸಬೇಕು. ಇವು ರಾಜ್ಯದ ಪಾಲಿಗೆ ಪ್ರಮುಖ ಯೋಜನೆಗಳಾಗಿವೆ ಎನ್ನುವುದನ್ನು ಮರೆಯಬಾರದು ಎಂದಿರುವ ಸಚಿವರು, ಇವುಗಳಿಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದರು.
ಸಚಿವರು ಇದೇ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಮತ್ತು ಅದರ ವ್ಯಾಪ್ತಿಯ ಎಂಎಸ್ ಐಎಲ್, ಕೆಎಸ್ ಡಿಎಲ್, ಎಂಸಿ ಆ್ಯಂಡ್ ಎ ಸೇರಿದಂತೆ ಇತರ ಸಂಸ್ಥೆಗಳ ಪ್ರಗತಿ ಪರಿಶೀಲಿಸಿದರು.
ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವಗುಪ್ತ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ, ಕೆಎಸ್ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.